ಇಸ್ರೇಲ್: ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಪತನವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಇಸ್ರೇಲ್ ಗೋಲನ್ ಹೈಟ್ಸ್ನಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಟೆಲ್ ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಪತನದ ಹಿನ್ನೆಲೆಯಲ್ಲಿ ಇಸ್ರೇಲ್-ಸಿರಿಯಾ ಗಡಿಯ ಗೋಲನ್ ಹೈಟ್ಸ್ನ ಬಫರ್ ವಲಯದ ಕೆಲ ಹೊಸ ಪ್ರದೇಶಗಳಲ್ಲಿ ಇಸ್ರೇಲ್ ತನ್ನ ಪಡೆಗಳನ್ನು ನಿಯೋಜಿಸಿದೆ. ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಈ ಕ್ರಮವನ್ನು ದೃಢಪಡಿಸಿದ್ದು, 1974ರ ಸೇನಾ ಹಿಂತೆಗೆತ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇದು ಇಂಥ ಮೊದಲ ನಿಯೋಜನೆಯಾಗಿದೆ.
“ಬಫರ್ ವಲಯಕ್ಕೆ ಸಶಸ್ತ್ರ ಹೋರಾಟಗಾರರ ಪ್ರವೇಶ ಸಾಧ್ಯತೆ ಸೇರಿದಂತೆ ಸಿರಿಯಾದಲ್ಲಿ ಇತ್ತೀಚಿನ ಘಟನೆಗಳ ನಂತರ ಎದುರಾಗಿರುವ ಸನ್ನಿವೇಶದ ಮೌಲ್ಯಮಾಪನಕ್ಕೆ ಅನುಗುಣವಾಗಿ ಗೋಲನ್ ಹೈಟ್ಸ್ನಲ್ಲಿನ ನಿವಾಸಿಗಳು ಮತ್ತು ಇಸ್ರೇಲ್ ನಾಗರಿಕರ ಸುರಕ್ಷತೆಯನ್ನು ಕಾಪಾಡಲು ಐಡಿಎಫ್ ಬಫರ್ ವಲಯದಲ್ಲಿ ಮತ್ತು ತನ್ನ ರಕ್ಷಣೆಗೆ ಅಗತ್ಯವಾದ ಹಲವಾರು ಸ್ಥಳಗಳಲ್ಲಿ ಪಡೆಗಳನ್ನು ನಿಯೋಜಿಸಿದೆ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಐಡಿಎಫ್ ಪೋಸ್ಟ್ ಮಾಡಿದ್ದಾರೆ.
“ಸಿರಿಯಾದಲ್ಲಿ ನಡೆಯುತ್ತಿರುವ ಘಟನೆಗಳಲ್ಲಿ ಐಡಿಎಫ್ ಮಧ್ಯಪ್ರವೇಶಿಸುವುದಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ” ಎಂದು ಐಡಿಎಫ್ ಹೇಳಿಕೊಂಡಿದೆ.
ಇಸ್ರೇಲಿ ಗಡಿಗೆ ಸಮೀಪವಿರುವ ಹ್ಯಾಡರ್ ಪಟ್ಟಣದ ಬಳಿ ಬಂದೂಕುಧಾರಿಗಳ ದಾಳಿಯನ್ನು ಹಿಮ್ಮೆಟ್ಟಿಸಲು ಗೋಲನ್ ಹೈಟ್ಸ್ನ ಸಿರಿಯನ್ ಬದಿಯಲ್ಲಿರುವ ವಿಶ್ವಸಂಸ್ಥೆಯ ಪಡೆಗಳಿಗೆ ಸಹಾಯ ಮಾಡುತ್ತಿರುವುದಾಗಿ ಇಸ್ರೇಲ್ ಮಿಲಿಟರಿ ಶನಿವಾರ ಸಂಜೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಬಂಡುಕೋರ ಪಡೆಗಳ ಪ್ರಾಬಲ್ಯ ಅತ್ಯಂತ ವೇಗವಾಹಿ ಹೆಚ್ಚುತ್ತಿರುವ ಮಧ್ಯೆ, ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಸರ್ಕಾರದ ಪತನದ ನಂತರ ಎದುರಾಗಬಹುದಾದ ಪರಿಸ್ಥಿತಿಗಳನ್ನು ಎದುರಿಸಲು ಇಸ್ರೇಲ್ ಎಲ್ಲ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಕಳೆದ ವಾರಾಂತ್ಯದಲ್ಲಿ, ಸಿರಿಯಾ ಬಂಡುಕೋರರು ದೇಶದ ಎರಡನೇ ಅತಿದೊಡ್ಡ ನಗರವಾದ ಅಲೆಪ್ಪೊವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಕೆಲವೇ ದಿನಗಳಲ್ಲಿ, ದೇಶದ ಮಧ್ಯಭಾಗದಲ್ಲಿರುವ ಹಮಾ ನಗರವನ್ನು ಸಹ ಅವರು ವಶಪಡಿಸಿಕೊಂಡಿದ್ದಾರೆ. ಶನಿವಾರ ಅವರು ಪ್ರಮುಖ ನಗರವಾದ ಹೋಮ್ಸ್ ಅನ್ನು ಪ್ರವೇಶಿಸಿದ್ದು, ರಾಜಧಾನಿ ಡಮಾಸ್ಕಸ್ ಅನ್ನು ಸುತ್ತುವರಿಯಲು ಪ್ರಾರಂಭಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸಿರಿಯಾದ ಬಂಡುಕೋರ ಪಡೆಗಳು ವಾರಾಂತ್ಯದಲ್ಲಿ ದೇಶದಾದ್ಯಂತ ಮಿಂಚಿನ ವೇಗದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಇಸ್ರೇಲ್ ಗಡಿಯ ಸಮೀಪವಿರುವ ಕ್ಯುನೆಟ್ರಾ ಮತ್ತು ದಾರಾ ಪ್ರದೇಶಗಳನ್ನು ವಶಪಡಿಸಿಕೊಂಡಿರುವುದಾಗಿ ಶನಿವಾರ ತಿಳಿಸಿವೆ. ಈ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಲು ಯತ್ನಿಸಿದರೆ ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಐಡಿಎಫ್ ಎಚ್ಚರಿಕೆ ನೀಡಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now