ಬೆಂಗಳೂರು: ವಿದ್ಯಾರ್ಥಿಗಳ ಉಚಿತ ಶಿಕ್ಷಣದ ಹೆಸರಿನಲ್ಲಿ ಶೈಕ್ಷಣಿಕ ಸಾಲ ಪಡೆದು ವಿವಿಧ ಬ್ಯಾಂಕುಗಳಿಗೆ ಸುಮಾರು 18 ಕೋಟಿ ರೂ.ಗಳನ್ನು ವಂಚಿಸಿದ, ಆಂಧ್ರ ಮೂಲದ ಶ್ರೀನಿವಾಸ ಎಂಬ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತ ಜಯನಗರದಲ್ಲಿ ಆನ್ ಕೋರ್ಸ್ ಗಳ ಕೇಂದ್ರವೊಂದನ್ನು ತೆರೆದು ಅಲ್ಲಿಗೆ ದಾಖಲಾದ ವಿದ್ಯಾರ್ಥಿಗಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಗ್ರೀಕ್ ಲರ್ನಿಂಗ್ ಎಜುಕೇಷನ್ ಇನ್ಸ್ಟಿಟ್ಯೂಟ್ ಎಂಬ ಹೆಸರಿನಲ್ಲಿ ಜಯನಗರದಲ್ಲಿ ಕಚೇರಿಯನ್ನೂ ತೆರೆದಿದ್ದ. ಈ ಕೇಂದ್ರದಲ್ಲಿ 2,500 ವಿದ್ಯಾರ್ಥಿಗಳು ಸೇರಿದ್ದರು. ಡೇಟಾ ಸೈನ್ಸ್ ಶಿಕ್ಷಣ ಪಡೆಯುವ ಮೂಲಕ ಉತ್ತಮ ಉದ್ಯೋಗಾವಕಾಶಗಳು, ಹೆಚ್ಚಿನ ಸಂಬಳದ ಆಮಿಷ ಒಡ್ಡಲಾಗುತ್ತಿತ್ತು.
ದಾಖಲಾದ ಸುಮಾರು 2,500 ವಿದ್ಯಾರ್ಥಿಗಳಿಂದ ಆತ ಸೂಕ್ತ ದಾಖಲೆಗಳನ್ನು ಪಡೆದು ಆತ ಅವರನ್ನು ಕೋರ್ಸ್ ಗೆ ಸೇರಿಸಿಕೊಂಡಿದ್ದ ಎಂದು ಹೇಳಲಾಗಿದೆ.
ಡೇಟಾ ಸೈನ್ಸ್ ಕೋರ್ಸ್ ಗಾಗಿ ಸೇರಿದ ವಿದ್ಯಾರ್ಥಿಗಳ ದಾಖಲೆಗಳನ್ನು ಬಳಸಿ ಆತ ವಿವಿಧ ಬ್ಯಾಂಕುಗಳಲ್ಲಿ ಶೈಕ್ಷಣಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಮುಂದುವರಿಸಲಾಗಿದ್ದು, ಇನ್ನೂ ಎಷ್ಟು ವಿದ್ಯಾರ್ಥಿಗಳಿಗೆ ಹಾಗೂ ಇನ್ನೂ ಎಷ್ಟು ಕಡೆ ಈತ ಇಂಥ ಕೃತ್ಯಗಳನ್ನು ಮಾಡಿದ್ದಾನೆ ಎಂಬುದು ನಂತರ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಬ್ಯಾಂಕುಗಳಿಂದ ಈವರೆಗೆ ಆತ 18 ಕೋಟಿ ರೂ.ಗಳನ್ನು ಲಪಟಾಯಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.