ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಮುಂಗಾರಿನ ಬೆನ್ನಲ್ಲೇ ಹಿಂಗಾರು ಮಳೆಯೂ ಎಲ್ಲೆಡೆ ಸುರಿಯುತ್ತಿರುವ ಪರಿಣಾಮ ರಾಜ್ಯದಲ್ಲಿ ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಕರ್ನಾಟಕದ ಬಹುತೇಕ ರಾಜ್ಯಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದೆ. ಮುಂಗಾರು ಕೈಕೊಟ್ಟರೂ, ಹಿಂಗಾರು ಉತ್ತಮ ಮಳೆ ಸುರಿಸುವ ಮೂಲಕ ಕೊರತೆಯನ್ನು ನೀಗಿಸಿದೆ. ರಾಮನಗರ, ರಾಯಚೂರು, ಗದಗ ಜಿಲ್ಲೆಗಳು ಮಾತ್ರ ವಾಡಿಕೆಗಿಂತ ಕಡಿಮೆ ಮಳೆ ಕಂಡಿವೆ. ಕರಾವಳಿಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ.
ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಮೂರು ಜಿಲ್ಲೆಗಳಲ್ಲಿ ಮಾತ್ರ ಮಳೆ ಪ್ರಮಾಣ ವಾಡಿಕೆಗಿಂತ ತುಸು ಕಡಿಮೆ ದಾಖಲಾಗಿದೆ.
ದಕ್ಷಿಣ ಒಳನಾಡಿನ ರಾಮನಗರ, ಉತ್ತರ ಒಳನಾಡಿನ ರಾಯಚೂರು, ಗದಗ ಜಿಲ್ಲೆಗಳಲ್ಲಿ ಮಾತ್ರ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆ ದಾಖಲಾಗಿದೆ. ರಾಮನಗರದಲ್ಲಿ ಶೇ.1, ರಾಯಚೂರಿನಲ್ಲಿ ಶೇ. 1ರಷ್ಟು ಮಳೆ ಕೊರತೆ ಉಂಟಾದರೆ ಗದಗ ಜಿಲ್ಲೆಯಲ್ಲಿ ಶೇ.3ರಷ್ಟು ಮಳೆ ಕಡಿಮೆಯಾಗಿದೆ. ಉಳಿದಂತೆ ರಾಜ್ಯದ 28 ಜಿಲ್ಲೆಗಳಲ್ಲಿಯೂ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ.
ಕರಾವಳಿ ಜಿಲ್ಲೆಗಳಿಗೆ ಈ ಬಾರಿಯೂ ಅತಿ ಹೆಚ್ಚು ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಂತೆ ಕರಾವಳಿಯ ಜ.1ರಿಂದ ಅ.31ರ ವರೆಗಿನ ಸರಾಸರಿ ವಾಡಿಕೆ ಮಳೆ 3447 ಮಿ.ಮೀ ಆಗಿದ್ದು, ಈ ಬಾರಿ 4235 ಮಿ.ಮೀ ಮಳೆಯಾಗಿದೆ.
ಆ ಮೂಲಕ ವಾಡಿಕೆಗಿಂತ ಶೇ.23ರಷ್ಟು ಹೆಚ್ಚು ಮಳೆಯಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಒಳಗೊಂಡಂತೆ ಮಲೆನಾಡು ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ವಾಡಿಕೆ ಮಳೆ 1883 ಮಿ.ಮೀ ಇದ್ದರೆ, ಈ ಬಾರಿ 2263 ಮಿ.ಮೀ ಮಳೆಯಾಗಿದೆ.
ಆ ಮೂಲಕ ಶೇ.20ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ದಕ್ಷಿಣ ಒಳನಾಡಿನ 11 ಜಿಲ್ಲೆಗಳ ಒಟ್ಟಾರೆ ಸರಾಸರಿ ವಾಡಿಕೆ ಮಳೆ 650 ಮಿ.ಮೀ ಆಗಿದ್ದು, ಈ ಬಾರಿ 802 ಮಿ.ಮೀ ಮಳೆಯಾಗಿದೆ. ಆ ಮೂಲಕ ವಾಡಿಕೆಗಿಂತ ಶೇ.23ರಷ್ಟು ಹೆಚ್ಚು ಮಳೆ ದಾಖಲಾಗಿದೆ.
ಉಳಿದಂತೆ ಉತ್ತರ ಒಳನಾಡಿನ 13 ಜಿಲ್ಲೆಗಳ ಒಟ್ಟಾರೆ ಸರಾಸರಿ ಮಳೆ 669 ಮಿ.ಮೀ ಆಗಿದ್ದು, 767 ಮಿ.ಮೀ ನಷ್ಟು ಮಳೆಯಾಗಿದೆ. ಆ ಮೂಲಕ ಈ ಭಾಗಕ್ಕೆ ಶೇ.15 ರಷ್ಟು ಹೆಚ್ಚು ಮಳೆಯಾಗಿದೆ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿಯೂ ವಾಡಿಕೆಗಿಂತ ಹೆಚ್ಚು ಮಳೆಯಾಗಲಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಿದೆ. ಆದರೆ ಅಕ್ಟೋಬರ್ ತಿಂಗಳವರೆಗೆ ಇದ್ದಷ್ಟು ಮಳೆ ಇರುವುದಿಲ್ಲ. ಮಳೆ ಪ್ರಮಾಣ ಕಡಿಮೆಯಾಗಲಿದೆಯಾದರೂ ವಾಡಿಕೆಗಿಂತ ಹೆಚ್ಚೇ ಮಳೆಯಾಗಲಿದೆ.
ಈ ನಡುವೆ ಕರಾವಳಿಯಲ್ಲಿ ಮತ್ತೆ ವೈಪರಿತ್ಯ ಉಂಟಾಗಿ ವಾಯುಭಾರ ಕುಸಿತ, ಚಂಡಮಾರುತ ಸಂಭವಿಸಿದರೆ ಮಳೆ ಹೆಚ್ಚಾಗಬಹುದು” ಎಂದು ಮೈಸೂರು (ನಾಗನಹಳ್ಳಿ) ಹವಾಮಾನ ವಿಭಾಗದ ಸಹ ಸಂಶೋಧಕ ಡಾ.ಸುಮಂತ್ ಕುಮಾರ್ ಜಿ.ವಿ ತಿಳಿಸಿದ್ದಾರೆ.