ಉಡುಪಿಯ ಯುವಕರ ತಂಡವೊಂದು ಸುಜುಕಿ ಜಿಮ್ನಿ ವಾಹನದಲ್ಲಿ ಪ್ರವಾಸ ಕೈಗೊಂಡು 53 ದಿನಗಳಲ್ಲಿ 20 ರಾಜ್ಯಗಳ ಪ್ರವಾಸ ಮುಗಿಸಿ ಈ ಯುವಕರು ಹೋದ ಕಡೆ ಕರಾವಳಿಯ ಧಾರ್ಮಿಕ ಮಹತ್ವವವನ್ನು ಸಾರಿದ್ದಾರೆ.
ಕರಾವಳಿಯ ಪ್ರವಾಸೋದ್ಯಮದ ಪ್ರಚಾರ, ಅದರಲ್ಲೂ ಮುಖ್ಯವಾಗಿ ಕಾಪು ಹೊಸ ಮಾರಿಗುಡಿಯ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಈಶಾನ್ಯ ಭಾರತದಲ್ಲಿ ಯುವಕರ ತಂಡವೊಂದು ಸುಜುಕಿ ಜಿಮ್ನಿ ವಾಹನದಲ್ಲಿ ಸಂಚಾರ ಪೂರೈಸಿ ಬಂದಿದೆ.
ಕಾಪುವಿನ ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ತಂಡ ಉತ್ತರ ಭಾರತದ ಮೇಘಾಲಯ, ಮಿಜೋರಾಂ, ಒಡಿಶಾ ಸಹಿತ 20 ರಾಜ್ಯಗಳ ಪ್ರವಾಸ ಕೈಗೊಂಡಿತ್ತು. ಕಲೆ, ಸಂಸ್ಕೃತಿ, ಆಹಾರದ ಅಧ್ಯಯನ ನಡೆಸಿ ಪರಂಪರೆ ಎಲ್ಲೆಡೆ ಪ್ರಚುರಗೊಳಿಸುವ ಉದ್ದೇಶದೊಂದಿಗೆ ಸುಜುಕಿ ಜಿಮ್ನಿ ವಾಹನದಲ್ಲಿ ಕಳೆದ ಅ. 5 ರಂದು ಪ್ರವಾಸ ಆರಂಭಿಸಿತ್ತು.
53 ದಿನಗಳ ಪ್ರವಾಸ ಮುಗಿಸಿದ ತಂಡ ಕಾಪುವಿಗೆ ಆಗಮಿಸಿದೆ. ಕಾಪು ಹೊಸ ಮಾರಿಗುಡಿ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ಇವರನ್ನ ಸ್ವಾಗತಿಸಿದ್ದಾರೆ. ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ಶ್ರೀ ದೇವಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ವಿತರಿಸಿದರು. ಇದೇ ಸಂದರ್ಭ ಆಡಳಿತ ಮಂಡಳಿಯ ವತಿಯಿಂದ ತಂಡ ಸನ್ಮಾನಿಸಲಾಯಿತು.
ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರದ ಬಗ್ಗೆ, ನವದುರ್ಗಾ ಲೇಖನ ಯಜ್ಞದ ಬಗ್ಗೆ ಎಲ್ಲ ಕಡೆ ಮಾಹಿತಿ ನೀಡಿದ್ದು, ಕರಾವಳಿಯ ಧಾರ್ಮಿಕತೆಯ ಬಗ್ಗೆ ಉತ್ತರ ಭಾರತದಲ್ಲಿ ಪ್ರಚಾರಪಡಿಸಲಾಗಿದೆ.
ರಾಜ್ಯದಲ್ಲೇ ಅಪರೂಪ ಎಂಬಂತೆ ಹೊಸ ಮಾರಿಗುಡಿಯು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ದೇಶಾದ್ಯಂತ ಈ ಪ್ರಸಿದ್ಧ ಕ್ಷೇತ್ರದ ಬಗ್ಗೆ ಈ ಮೂಲಕ ಮಾಹಿತಿ ರವಾನಿಸಲಾಗಿದೆ.
”ಕಾಪು ಭಾಗದಿಂದ ನಾನು ಮತ್ತೆ ಅಭಿಜಿತ್ ಇಬ್ಬರು ಹೊರಟಿದ್ದೇವೆ. ಬಳಿಕ ಮಂಗಳೂರಿನಲ್ಲಿ ನಮ್ಮ ಸ್ನೇಹಿತರು ಸೇರಿ ಹೊರಟಿದ್ದೇವೆ. ಒಟ್ಟು 53 ದಿನಗಳಲ್ಲಿ ಪ್ರವಾಸ ಕೈಗೊಂಡು, ಈವರೆಗೆ 20 ರಾಜ್ಯಗಳ ಪ್ರವಾಸ ಮುಗಿಸಿದ್ದೇವೆ. ಹೋದ ಕಡೆಯಲ್ಲೆಲ್ಲಾ ಕರಾವಳಿ ಧಾರ್ಮಿಕತೆ ಮಹತ್ವವನ್ನು ತಿಳಿಸಿದ್ದೇವೆ, ಕಾಪು ಮಾರಿಗುಡಿಯ ಬಗ್ಗೆ ಹೇಳಿದ್ದೇವೆ” ಎಂದು ಪ್ರವಾಸಿಗ ಸಚಿನ್ ಶೆಟ್ಟಿ ತಿಳಿಸಿದ್ದಾರೆ.