ಮೈಸೂರಿನಲ್ಲಿ 40 ಸಾವಿರಕ್ಕೂ ಹೆಚ್ಚು ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ಪತ್ತೆ ಮಾಡಿ ಅವುಗಳನ್ನು ರದ್ದುಪಡಿಸಲಾಗಿದೆ. ಸರ್ಕಾರಿ ಸೌಲಭ್ಯಕ್ಕಾಗಿ ಅಕ್ರಮ ಕಾರ್ಡ್ ಪಡೆಯುವವರ ಸಂಖ್ಯೆ ಹೆಚ್ಚಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮಾಡುತ್ತಿದ್ದು, ಕಳೆದ ಸೆಪ್ಟೆಂಬರ್‌ವರೆಗೆ ವಿತರಣೆಯಾಗಿದ್ದ 1.8 ಲಕ್ಷ ಕಾರ್ಡ್‌ಗಳಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನಿರಂತರ ತಪಾಸಣಾ ಕಾರ್ಯ ನಡೆಸುವ ಮೂಲಕ ಬರೋಬ್ಬರಿ 44,084 ಕಾರ್ಡ್‌ಗಳನ್ನು ರದ್ದು ಪಡಿಸಿದ್ದಾರೆ.
ಕಾರ್ಮಿಕ ಇಲಾಖೆಯಿಂದ ನೀಡಿದ ಆಹಾರ ಕಿಟ್ ಮತ್ತು ಕಾರ್ಮಿಕರ ಖಾತೆಗೆ ನೀಡುವ 3 ಸಾವಿರ ರೂ. ಪ್ರೋತ್ಸಾಹ ಧನಕ್ಕಾಗಿ ಕಾರ್ಮಿಕರಲ್ಲದವರು ಸಹ ಕಾರ್ಡ್ ಮಾಡಿಸಿಕೊಂಡರು.
ಶಿಕ್ಷಕರು, ಪೊಲೀಸರು, ಖಾಸಗಿ ಕಂಪನಿ ನೌಕರರು, ವಾಹನ ಚಾಲಕರು, ಟೈಲರ್‌ಗಳು, ಕೃಷಿ ಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಹೋಟೆಲ್ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ.
ಬೋಗಸ್ ಕಾರ್ಡ್‌ಗಳ ಹಾವಳಿ ತಪ್ಪಿಸಲು ಕಾರ್ಮಿಕ ಇಲಾಖೆ ಹೊಸ ಮಾರ್ಗೋಪಾಯ ಕಂಡುಕೊಂಡಿದ್ದು, ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ನವೀಕರಣಕ್ಕೆ ಹೊಸ ನಿಯಮ ಜಾರಿಗೊಳಿಸಿದೆ.
ಸಾಕಷ್ಟು ಮಂದಿ ನಕಲಿ ಕಾರ್ಡ್ ಪಡೆದು ಯೋಜನೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅರ್ಹರಿಗೆ ಯೋಜನೆ ತಲುಪಬೇಕಾಗಿದೆ ಎಂದು ತಿಳಿಸಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಯೋಜನೆಗಳಡಿ ನೋಂದಣಿಯಾಗಿರುವ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆದಿರುವವರನ್ನು ಪತ್ತೆ ಹಚ್ಚಿ ಅಂತಹ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.