ಬೆಳಗಾವಿ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂದು ಬಹಳಷ್ಟು ಸಂಖ್ಯೆಯಲ್ಲಿ ಜನ ಆಗಮಿಸಿ ಇಲ್ಲಿನ ವಿಶಿಷ್ಟ ಕಲಾಕೃತಿಗಳನ್ನು ಕಣ್ತುಂಬಿಕೊಂಡು, ಅಲಂಕಾರಿಕ ಸಸಿಗಳನ್ನು ಖರೀದಿಸಿದರು.
ಸಿರಿಧಾನ್ಯದಲ್ಲಿ ಅರಳಿರುವ ಧ್ಯಾನಸ್ಥರಾಗಿ ಕುಳಿತ ಮಹಾತ್ಮ ಗಾಂಧಿ, ಗುರು ಮಡಿವಾಳೇಶ್ವರ ಕಲಾಕೃತಿಗಳು, ಚರಕ ನೇಯುತ್ತಿರುವ ಬಾಪೂಜಿ ಮೂರ್ತಿ, ಅದೇ ರೀತಿ ಗುಲಾಬಿ, ಸೇವಂತಿ, ಜರ್ಬೇರಾ, ಆರ್ಕಿಡ್ಸ್ ಬಣ್ಣ ಬಣ್ಣದ ಹೂವುಗಳಿಂದ ತಲೆ ಎತ್ತಿರುವ ಪ್ಯಾರಿಸ್ ‘ಐಫೆಲ್ ಟವರ್’, ರಂಗೋಲಿಯಲ್ಲಿ ಬಿಡಿಸಿರುವ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್ಚಂದ್ರ ಬೋಸ್ ಅವರ ಭಾವಚಿತ್ರಗಳು, ಕೆಟ್ಟದ್ದನ್ನು ನೋಡಬಾರದು-ಕೇಳಬಾರದು-ಮಾತಾಡಬಾರದು ಎಂಬ ಸಂದೇಶ ಸಾರುವ ಮೂರು ಮಂಗಗಳ ಜೊತೆಗೆ ಕೆಟ್ಟದ್ದನ್ನು ಮೊಬೈಲ್ನಲ್ಲಿ ನೋಡಬಾರದು ಎಂದು ಎಚ್ಚರಿಸುವ ಮತ್ತೊಂದು ಮಂಗನ ಮೂರ್ತಿ ನೋಡುಗರನ್ನು ಸೆಳೆಯುತ್ತಿದೆ.
ಜಿಲ್ಲೆಯ ಹ್ಯೂಮ್ ಪಾರ್ಕ್ನಲ್ಲಿ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಜಿಪಂ, ಜಿಲ್ಲಾ ತೋಟಗಾರಿಕಾ ಸಂಘ ಹಾಗೂ ಜಿಲ್ಲಾ ಕೃಷಿಕ ಸಮಾಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ. 13, 14 ಮತ್ತು 15ರಂದು ಜಿಲ್ಲಾ ಮಟ್ಟದ 65ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಅದೇ ರೀತಿ ಬೇಟಿ ಬಚಾವೋ-ಬೇಟಿ ಪಡಾವೋ ಸಂದೇಶ ಸಾರುವ ಕಲಾಕೃತಿ, ಮೈಸೂರಿನ ಕಲಾವಿದೆ ಗೌರಿ ಅವರು ಮರಳಿನಲ್ಲಿ ವನ್ಯಜೀವಿಗಳನ್ನು ಚಿತ್ರಿಸಿದ್ದು ಎಲ್ಲರನ್ನೂ ಆಕರ್ಷಿಸುತ್ತಿವೆ. ಇಂದು ಶನಿವಾರ ರಜೆ ಹಿನ್ನೆಲೆ ಕುಟುಂಬ ಸಮೇತರಾಗಿ ಆಗಮಿಸಿದ ಜನರು ಈ ಕಲಾಕೃತಿಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಪ್ರದರ್ಶನದಲ್ಲಿ ಇಟ್ಟಿದ್ದ ಗುಲಾಬಿ, ಸೇವಂತಿ, ಚೆಂಡು ಹೂವು, ಜರ್ಬೆರಾ, ಅಂಥೂರಿಯಂ, ಆರ್ಕಿಡ್ಸ್, ಸಾಲ್ವಿಯಾ, ಪೆಟೂನಿಯಾ, ಜಿರೇನಿಯಂ, ಡಯಾಂತಸ್, ಹೈಪೋಸ್ಟಸ್, ಬೊನ್ಸಾಯಿ, ಸೆಕ್ಯುಲೆಂಟ್, ಹಣ್ಣು, ತರಕಾರಿ, ಪ್ಲಾಂಟೇಶನ್ ಸೇರಿ ವಿವಿಧ ರೀತಿಯ ಅಲಂಕಾರಿಕ ಹೂವು ಮತ್ತು ಹೂವಿನ ಸಸಿಗಳು, ಸಾವಯವ ಎರೆಹುಳು ಗೊಬ್ಬರ, ಕೊಕೊಫಿಟ್, ಅಲಂಕಾರಿ ಕುಂಡಗಳು, ಕೃಷಿ ಸಲಕರಣೆಗಳನ್ನು ಪರಿಸರ ಪ್ರೇಮಿಗಳು ಮುಗಿಬಿದ್ದು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ‘ಈ ಬಾರಿಯ ಫಲಪುಷ್ಪ ಪ್ರದರ್ಶನ ಗಾಂಧೀಜಿ ಅವರಿಗೆ ಸಮರ್ಪಿಸುತ್ತಿದ್ದೇವೆ. ಗಾಂಧೀಜಿ ಅವರು ಹುಟ್ಟಿನಿಂದ-ಸಾಯುವವರೆಗಿನ ಅವರ ಮಹತ್ವದ ಫೋಟೋಗಳನ್ನು ಬೆಂಗಳೂರಿನ ಗಾಂಧಿ ಭವನದಿಂದ ತರಿಸಲಾಗಿದೆ. ಇದರಿಂದಾಗಿ, ಫಲಪುಷ್ಪ ಪ್ರದರ್ಶನಕ್ಕೆ ಬಂದವರಿಗೆ ಗಾಂಧೀಜಿ ದರ್ಶನ ಆಗುತ್ತಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾಳೆಯೂ ಒಂದು ದಿನ ಪ್ರದರ್ಶನ ಇರಲಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ’ ಎಂದು ಕೇಳಿಕೊಂಡರು.
ರೈತರ ಅನುಕೂಲಕ್ಕಾಗಿ ಸೋಲಾರ್ ಮೋಟಾರ್ ಮತ್ತು ಪ್ಯಾನಲ್ 3-5 ಹೆಚ್ಪಿವರೆಗೆ 1 ಲಕ್ಷ ರೂ. ಸಬ್ಸಿಡಿ, 5-10 ಹೆಚ್ಪಿವರೆಗೆ 1.5 ಲಕ್ಷ ಸಬ್ಸಿಡಿ ನೀಡಲಾಗುತ್ತಿದೆ. ಅದೇ ರೀತಿ ಅಟೋಮೆಟೆಡ್ ವೆದರ್ ಸ್ಟೇಶನ್ ಕೂಡ ಮಾರಾಟಕ್ಕೆ ಇಡಲಾಗಿದೆ. ಅಲ್ಲದೇ ಮೀನು ಮತ್ತು ಜೇನು ಕೃಷಿ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಯ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಪ್ರಜ್ವಲ್ ಕಿಣಗಿ ಮಾತನಾಡಿ, ನಾವು ಪ್ರತಿವರ್ಷ ಪ್ರದರ್ಶನಕ್ಕೆ ಬರುತ್ತೇವೆ. ಆದರೆ, ಈ ಬಾರಿ ತುಂಬಾ ವಿಶಿಷ್ಟವಾಗಿ ಆಯೋಜಿಸಲಾಗಿದೆ. ಗಾಂಧೀಜಿ ಪ್ರತಿಮೆ, ಐಫೆಲ್ ಟವರ್ ಸೇರಿ ಮತ್ತಿತರ ಕಲಾಕೃತಿಗಳು ತುಂಬಾ ಆಕರ್ಷಕವಾಗಿವೆ. ಹೊಸ ಸಸಿಗಳು ಮಾರಾಟಕ್ಕಿವೆ ಎಂದು ತಿಳಿಸಿದರು.
ಸಸಿಗಳ ಖರೀದಿಗೆ ಬಂದಿದ್ದ ಪೊಲೀಸ್ ಅಧಿಕಾರಿ ಅಡಿವೆಪ್ಪ ವಾರದ್ ಮಾತನಾಡಿ, ‘ನಮ್ಮ ಮನೆ ಸುತ್ತ ಒಂದು ಕೈತೋಟ ಇರಬೇಕು. ಒಳ್ಳೆಯ ವಾತಾವರಣ ನಿರ್ಮಿಸಬೇಕೆಂದು ನಾನಾ ರೀತಿಯ ಹೂವಿನ ಸಸಿಗಳನ್ನು ಖರೀದಿಸಿದ್ದೇವೆ. ಈಗ ಜಾಗತಿಕ ತಾಪಮಾನದ ಗಂಭೀರ ಸಮಸ್ಯೆ ಇದೆ. ಹಾಗಾಗಿ, ಮನೆಗಳಿಗೆ ಸಿಮೆಂಟ್, ಇಟ್ಟಿಗೆ ಕಾಂಪೌಂಡ್ ನಿರ್ಮಿಸದೆ ಅಲಂಕಾರಿಕ ಹೂವುಗಳಿಂದಲೇ ಕಾಂಪೌಂಡ್ ಸ್ಥಾಪಿಸಲು ಮುಂದಾಗಿದ್ದೇವೆ. ಅದೇ ರೀತಿ ನಮ್ಮ ಮಕ್ಕಳಿಗೆ ಸಸಿ, ಗಿಡ, ಮರ, ನಿಸರ್ಗದ ಸಂರಕ್ಷಣೆ ಕುರಿತು ಪ್ರದರ್ಶನದಲ್ಲಿ ತಿಳಿಯುತ್ತಿದೆ. ಸಸಿಗಳು ರಿಯಾಯಿತಿ ದರದಲ್ಲಿ ಸಿಗುತ್ತಿವೆ’ ಎಂದು ಹೇಳಿದರು.
ವಿದ್ಯಾರ್ಥಿನಿ ಅಮೃತಾ ಕಾಂಬಳೆ ಎಂಬುವವರು ಮಾತನಾಡಿ, ವಿವಿಧ ರೀತಿಯ ಹೂವಿನ ಸಸಿಗಳ ಪರಿಚಯ ನಮಗೆ ಆಯಿತು. ಪ್ರದರ್ಶನಕ್ಕೆ ಕಾಲಿಡುತ್ತಿದ್ದಂತೆ ನಮಗೆ ಗಾಂಧೀಜಿ ದರ್ಶನವಾಯಿತು. ಮರಳಿನಲ್ಲಿ ಬಿಡಿಸಿರುವ ಚಿತ್ರ, ರಂಗೋಲಿಯಲ್ಲಿ ತೆಗೆದಿರುವ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಸೇರಿ ಕರ್ನಾಟಕದ ಸಂಸ್ಕೃತಿಯನ್ನು ಇಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.