ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ 8,9,10 ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯು ನಡೆಯುತ್ತಿದ್ದು, ಫಲಿತಾಂಶ ಪ್ರಕಟಿಸದಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಡೆಸಲಾಗಿರುವ 8, 9 ಮತ್ತು 10ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಗಳ (SA-1) ಫಲಿತಾಂಶವನ್ನು ಮುಂದಿನ ಆದೇಶದವರೆಗೂ ಪ್ರಕಟಿಸದಂತೆ ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿ ಅಗತ್ಯ ಕ್ರಮವಹಿಸಲು ತಿಳಿಸಿದೆ ಎಂದು ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ (SA-1) ಫಲಿತಾಂಶವನ್ನು ಪ್ರಕಟಿಸದಿರಲು ಹಾಗೂ ಯಾವುದೇ ಶಾಲೆಯು ಈವರೆವಿಗೂ ಮಧ್ಯವಾರ್ಷಿಕ ಪರೀಕ್ಷೆ (SA-1) ಅನ್ನು ನಡೆಸಿಲ್ಲದಿದ್ದಲ್ಲಿ ಅಂತಹ ಶಾಲೆಯು ಪರೀಕ್ಷೆಯನ್ನು ನಡೆಸದಿರಲು ಆದೇಶಿಸಿರುತ್ತದೆ.
ಘನ ಸರ್ವೋಚ್ಚ ನ್ಯಾಯಾಲಯದ ದಾವೆ ಸಂಖ್ಯೆ ಎಸ್.ಎಲ್.ಪಿ. ಸಂಖ್ಯೆ-8142/2024 ಸಂಬಂಧಿಸಿದಂತೆ ದಿನಾಂಕ: 21-10-2024 ರಂದು ನೀಡಿದ ಮಧ್ಯಂತರ ತೀರ್ಪಿನ ಅನ್ವಯ. ಮಧ್ಯಂತರ ಆದೇಶದನ್ವಯ, ಘನ ಸರ್ವೋಚ್ಚ ನ್ಯಾಯಾಲಯವು ಮುಂದಿನ ಆದೇಶದವರೆಗೂ ಪ್ರಕಟಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬೋರ್ಡ್ ಪರೀಕ್ಷೆ ನಡೆಸಲಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ತಾರದೇ ಪರೀಕ್ಷೆ ನಡೆಸಲಾಗಿತ್ತು. ಹತ್ತನೇ ತರಗತಿ ಪರೀಕ್ಷೆಗೆ ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಬೋರ್ಡ್ ಪರೀಕ್ಷೆ ವಿವಾದ ಭುಗಿಲೇಳುತ್ತಿದ್ದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಫಲಿತಾಂಶಕ್ಕೆ ಸರ್ಕಾರ ತಡೆ ನೀಡಿತ್ತು. ಸರ್ಕಾರದ ಈ ನಿಲುವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಪರ ವಕೀಲ ಕೆವಿ ಧನಂಜಯ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕಳೆದ ವರ್ಷದ ಆದೇಶ ಉಲ್ಲೇಖಿಸಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ.