ನಟ ದರ್ಶನ್ ಜೈಲು ಸೇರಿ ತಿಂಗಳ ಮೇಲಾಯ್ತು. ಒಳಗೆ ದಾಸ ಸೆರೆಮನೆ ವಾಸ ಸಹಿಸಲಾರದೇ ಪರದಾಡ್ತಿದ್ರೆ ಹೊರಗೆ ಅವರ ಕುಟುಂಬ ಪರಿತಪಿಸುತ್ತಿದೆ. ಇತ್ತ ಫ್ಯಾನ್ಸ್ ಕೂಡ ಬಾಸ್ ಯಾವಾಗ ಬಿಡುಗಡೆಯಾಗ್ತಾರೆ ಅಂತ ಕಾಯ್ತಿದ್ದಾರೆ. ಎಲ್ಲದರ ನಡುವೆ ಪತಿಯ ಜೈಲು ವಿಮೋಚನೆಗಾಗಿ ಧರ್ಮಪತ್ನಿ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಸೆರೆಮನೆ ವಾಸಕ್ಕೆ ನಿಧಾನವಾಗಿ ಹೊಂದಿಕೊಂಡ ದಾಸ ಊಟಕ್ಕೆ ಮಾತ್ರ ಒಗ್ಗಿಕೊಳ್ತಿಲ್ಲ. ಹೀಗಾಗಿ ಮನೆ ಊಟಕ್ಕೆ ದರ್ಶನ್ ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಇದು ದಾಸನಿಗೆ ನುಂಗಲಾರದ ತುತ್ತಾಗಿದೆ. ಇದರ ಜೊತೆಗೆ ಸದ್ಯಕ್ಕೆ ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಲಕ್ಷಣವಂತೂ ಇಲ್ಲವೇ ಇಲ್ಲ. ಹೀಗಿರುವಾಗ ಪತಿಯ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಇನ್ನಿಲ್ಲದಂತೆ ಕಸರತ್ತು ನಡೆಸಿದ್ದು ಈಗ ದೇವರ ಮೊರೆ ಹೋಗಿದ್ದಾರೆ.
ಪತಿ ಸಂಕಷ್ಟದಲ್ಲಿದ್ರೆ ಅದ್ಯಾವ ಪತ್ನಿ ಸುಮ್ಮನಿರಾಕಾಗುತ್ತೆ ಹೇಳಿ. ಈಗ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಕೂಡ ಶತಾಯಗತಾಯವಾಗಿ ಪ್ರಯತ್ನಿಸ್ತಿದ್ದಾರೆ. ಇದಕ್ಕಾಗಿ ಕೊಲ್ಲೂರು ಮೂಕಾಂಬಿಕೆಯ ಮೊರೆ ಹೋಗಿದ್ದಾರೆ. ಉಡುಪಿಯ ಮೂಕಾಂಬಿಕಾ ಸನ್ನಿಧಿಗೆ ಕಳೆದ ರಾತ್ರಿ ಆಪ್ತರ ಜೊತೆ ತೆರಳಿರುವ ವಿಜಯಲಕ್ಷ್ಮೀ ದೇವಿಯ ದರ್ಶನ ಪಡೆದಿದ್ದು ಇಂದು ಶಕ್ತಿಯುತ ನವಚಂಡಿಕಾ ಯಾಗ ನಡೆಸಲಿದ್ದಾರೆ. ಇಂದು ಬೆಳಗ್ಗೆ ಚಂಡಿಕಾ ಹೋಮ ಶುರುವಾಗಲಿದ್ದು ಸನ್ನಿಧಿಯಲ್ಲಿ ಸಂಕಲ್ಪ, ಪಾರಾಯಣ ನಡೆಯಲಿದೆ.
ಈ ನವಚಂಡಿಕಾ ಯಾಗವನ್ನು ಹೇಗೆ ನಡೆಸ್ತಾರೆ. ಇದರ ಮಹತ್ವವೇನು ಅನ್ನೋದನ್ನ ಶರತ್ ಗೌರೀಶ್ ಗುರೂಜಿ ನ್ಯೂಸ್ಫಸ್ಟ್ಗೆ ತಿಳಿಸಿದ್ದಾರೆ.
ಚಂಡಿಕಾ ಪಾರಾಯಾಣ ಮತ್ತು ಚಂಡಿಕಾ ಹೋಮ ಅನ್ನೋದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಷ್ಟಕಾಲ ಬಂದಾಗ ಮಾಡುತ್ತಾರೆ. ನಮಗೆ ತೊಂದರೆಯಾದಾಗ, ಶತ್ರುಗಳ ಉಪದ್ರವ ಆದಾಗ ಯಾಗವನ್ನು ಮಾಡುತ್ತಾರೆ. ರಾಜ ರಾಜ್ಯವನ್ನಾಳಬೇಕಾದರೆ ಯಾವ್ಯಾವ ರೀತಿ ಕಷ್ಟ ಪಟ್ಟಿದ್ದ, ಶತ್ರುಗಳಿಂದ ಉಪದ್ರವ ಉಂಟಾಗಿ ಸೋಲು ಉಂಟಾಗಿ ಮತ್ತೆ ಅಲ್ಲಿಂದ ಚೇತರಿಸಿಕೊಳ್ಳುತ್ತಾನೆ. ವೈಶ್ಯನನ್ನು ಕೂಡ ಕುಟುಂಬದಿಂದ ತೊಂದರೆಯಾಗಿ ಹೊರಗಡೆ ಆಗ್ತಾರೆ. ಆಗ ಇಬ್ಬರು ಆಶ್ರಮಕ್ಕೆ ಹೋಗಿ ಅಲ್ಲಿ ಮಾರ್ಗದರ್ಶನ ಪಡೆದು ಚಂಡಿಕಾ ಪಾರಾಯಣ ಮಾಡಿ, ಹೋಮ ಮಾಡಿ ಕಳೆದುಕೊಂಡಿದ್ದನ್ನೆಲ್ಲ ಮತ್ತೆ ಪಡೆದುಕೊಳ್ಳುತ್ತಾರೆ. ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿ ದೇವಿರನ್ನು ಆರಾಧನೆ ಮಾಡುತ್ತಾರೆ. ಚಂಡಿಕಾ ಪಾರಾಯಾಣ, ಸಪ್ತಸತಿ ಪಾರಾಯಣ ಎಂದು ಹೇಳುತ್ತಾರೆ. ಈ ಸಪ್ತಸತಿ ಪಾರಾಯಾಣದಲ್ಲಿ 700 ಶ್ಲೋಕಗಳಿವೆ.
ನಾವು ಮಾಡುವಂತಹ ಕೆಲಸಗಳಿಗೆ ಎಲ್ಲಿಯೂ ದಾರಿ ಸಿಗದೇ ಇದ್ದಾಗ, ಪ್ರಯತ್ನಗಳೆಲ್ಲ ವಿಫಲವಾದಾಗ ಆ ಸಂದರ್ಭದಲ್ಲಿ 9 ಪಾರಾಯಾಣ ಮಾಡಿ, ಒಂದು ಹೋಮ ಮಾಡಿದರೆ ನವಚಂಡಿಯಾಗ ಎನ್ನುತ್ತಾರೆ. ನವಚಂಡಿಕಾಯಾಗ ಮಾಡಿದಾಗ ದೇವಿಯ ಅನುಗ್ರಹ ಉಂಟಾಗುತ್ತೆ ಎನ್ನುವುದು ಸನಾತನ ಧರ್ಮದ ನಂಬಿಕೆ.
ಶರತ್ ಗೌರೀಶ್ ಗುರೂಜಿ, ಪ್ರತ್ಯಂಗಿರಾ ದೇವಿ ಆರಾಧಕರು
ಇದೇ ವೇಳೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲೇ ನವಚಂಡಿಕಾ ಯಾಗ ಯಾಕೆ ನಡೆಸ್ತಾರೆ. ಕ್ಷೇತ್ರದಲ್ಲಿ ನಡೆಸುವುದರ ಮಹತ್ವವೇನು ಅನ್ನೋದನ್ನ ಕೂಡ ಗುರೂಜಿ ಮಾಹಿತಿ ನೀಡಿದ್ದಾರೆ.
ರ್ನಾಟಕದಲ್ಲಿ ಶಕ್ತಿ ಪೀಠ ಎನ್ನುವಂತದ್ದು ಆದಿ ಶಂಕರಚಾರ್ಯರು ಪ್ರತಿಷ್ಠಾಪನೆ ಮಾಡಿದ್ದಾರೆ. ಮೂರು ದೇವಿ ಸ್ವರೂಪವನ್ನು ಒಂದೊಂದು ರೀತಿಯಲ್ಲಿ ಆರಾಧನೆ ಮಾಡುವಂತ ಏಕೈಕ ಸ್ಥಳ ಅದು ಕೊಲ್ಲೂರು ಮೂಕಾಂಬಿಕಾ. ಇಲ್ಲಿ ಹೋಮ ಮಾಡಿಸುವುದರಿಂದ ಹೆಚ್ಚಿನ ಪ್ರಭಾವ, ಫಲ ಸಿಗುತ್ತದೆ.
ಶರತ್ ಗೌರೀಶ್ ಗುರೂಜಿ, ಪ್ರತ್ಯಂಗಿರಾ ದೇವಿ ಆರಾಧಕರು
ಪತಿ ದರ್ಶನ್ನನ್ನು ಜೈಲಿನಿಂದ ಬಿಡುಗಡೆ ಮಾಡಲು ಸತಿ ವಿಜಯಲಕ್ಷ್ಮೀ ಸದ್ಯ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ. ಕರಾವಳಿಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವಚಂಡಿಕಾ ಯಾಗ ನಡೆಸಲಿದ್ದಾರೆ. ಈ ಮೂಲಕ ಪತಿಯ ಜೈಲು ವಿಮೋಚನೆಗೆ ಯಾಗ ನಡೆಸಲಿದ್ದಾರೆ.