ನಾಯಕನಹಟ್ಟಿ (ಚಿತ್ರದುರ್ಗ): ವಾರದಿಂದ ಸುರಿದ ಸತತ ಮಳೆಗೆ ನಾಯಕನಹಟ್ಟಿ ಪಟ್ಟಣ ಸುತ್ತಲಿನ ಪ್ರದೇಶದಲ್ಲಿರುವ 2.5 ಕೋಟಿ ರೂ. ವೆಚ್ಚದ ಮೂರು ಚೆಕ್ ಡ್ಯಾಂಗಳು ಕೊಚ್ಚಿ ಹೋಗಿವೆ.
ಮೂರು ಚೆಕ್ ಡ್ಯಾಂಗಳನ್ನು ಒಂದೇ ಮಾದರಿಯಲ್ಲಿ ನಿರ್ಮಾಣಗೊಂಡಿವೆ. ಆದರೆ ಚೆಕ್ ಡ್ಯಾಂನ ಎರಡೂ ಬದಿಯಲ್ಲಿ ನಿರ್ಮಿಸಲಾಗಿರುವ ರಿವೀಟ್‌ಮೆಂಟ್ ಕಳಪೆ ಗುಣಮಟ್ಟದ್ದಾಗಿದೆ. ಹಳ್ಳಕ್ಕೆ ಅಡ್ಡಲಾಗಿ ವಾಲ್ ನಿರ್ಮಿಸಿದ ನಂತರ ಎರಡೂ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣು ಹಾಕಲಾಗುವುದು. ನಂತರ ಒಳಭಾಗದಲ್ಲಿ ಕಲ್ಲಿನ ಕಟ್ಟಡ ನಿರ್ಮಿಸುವುದು ಚೆಕ್ ಡ್ಯಾಂನಲ್ಲಿರುವ ಸಾಮಾನ್ಯ ರಚನೆಯಾಗಿದೆ. ಆದರೆ ಇಲ್ಲಿನ ಮೂರು ಚೆಕ್ ಡ್ಯಾಂಗಳಲ್ಲಿ ಕೇವಲ ಮಣ್ಣು ಹಾಕಲಾಗಿದೆ. ಕಲ್ಲಿನ ರಿವೀಟ್‌ಮೆಂಟ್ ಇಲ್ಲದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಮಣ್ಣು ಕೊಚ್ಚಿ ಹೋಗಿದೆ. ಹೀಗಾಗಿ ಚೆಕ್ ಡ್ಯಾಂನಲ್ಲಿ ನೀರು ಸಂಗ್ರಹವಾಗಿಲ್ಲ.
25 ವರ್ಷದ ದಾಖಲೆ ಮಳೆ : ನಾಯಕನಹಟ್ಟಿ ಪ್ರದೇಶವು ಇಡೀ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಕುಖ್ಯಾತಿ ಪಡೆದಿದೆ. ಆದರೆ ಈ ಬಾರಿ 25 ವರ್ಷದ ಇತಿಹಾಸದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇಲ್ಲಿನ ಸರಾಸರಿ ವಾಡಿಕೆ ಮಳೆ 415.9 ಮಿಮೀ ಆಗಿದೆ. ಆದರೆ ಇಲ್ಲಿಯವರೆಗೆ 984.4 ಮಿಮೀ ಮಳೆಯಾಗಿದೆ. ಇದು 25 ವರ್ಷದ ಅತ್ಯಧಿಕ ಮಳೆಯಾಗಿದೆ. ಅ. 5ರಂದು 129.6 ಮಿಮೀ ಮಳೆಯಾಗಿದ್ದು ಇದು ಒಂದೇ ದಿನ ಸುರಿದ ಸರ್ವಕಾಲಿನ ದಾಖಲೆ ಮಳೆಯಾಗಿದೆ. ಹೀಗಾಗಿ ನಿರೀಕ್ಷೆ ಹಾಗೂ ಸರಾಸರಿಗಿಂತ ಹೆಚ್ಚು ಮಳೆ ಸುರಿದಿರುವುದು ಚೆಕ್‌ಡ್ಯಾಂಗಳು ಕೊಚ್ಚಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಸಣ್ಣ ನೀರಾವರಿ ಇಲಾಖೆ ಇವುಗಳನ್ನು ತಕ್ಷಣ ದೊರಸ್ತಿಗೊಳಿಸಿದರೆ ಅಂತರ್ಜಲದ ಮಟ್ಟ ಇನ್ನಷ್ಟು ಹೆಚ್ಚಲಿದೆ ಎನ್ನುವುದು ರೈತರ ಒತ್ತಾಯವಾಗಿದೆ. “ಮೂರು ಚೆಕ್ ಡ್ಯಾಂಗಳು ರಿವೀಟ್‌ಮೆಂಟ್ ಹಾಳಾಗಿರುವುದು ಗಮನಕ್ಕೆ ಬಂದಿದೆ. ಗುತ್ತಿಗೆದಾರರಿಗೆ ಇದನ್ನು ಸರಿಪಡಿಸಲು ಸೂಚಿಸಲಾಗಿದೆ. ತೇವಾಂಶ ಹೆಚ್ಚಾಗಿರುವುದರಿಂದ ವಾಹನಗಳ ಓಡಾಟ ಸಾಧ್ಯವಿಲ್ಲ. ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾದ ನಂತರ ದುರಸ್ತಿ ಕೈಗೊಳ್ಳಲಾಗುವುದು” ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಅಣ್ಣಪ್ಪ ತಿಳಿಸಿದ್ದಾರೆ.