ಗದಗ: ಗ್ರಾಮಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಕಳೆದ ಕೆಲ ದಿನಗಳಿಂದ ಮಕ್ಕಳು, ಹಸು, ಕುರಿ, ಮೇಕೆಗಳ ಮೇಲೆ ದಾಳಿ ಮಾಡಿದೆ. ಅಲ್ಲದೆ, ಗ್ರಾಮದಲ್ಲಿ ಹಲವು ನಾಯಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಬೀದಿ ನಾಯಿಗಳ ಸರಣಿ ಸಾವು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು, ಕುಂಡ್ರಹಳ್ಳಿ, ಕುಂಡ್ರಹಳ್ಳಿ ತಾಂಡಾ, ಶೆಟ್ಟಿ ಕೆರೆ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ.
ಈ ನಡುವೆ ನಾಯಿಗಳು ಹಸುಗಳನ್ನು ಕಚ್ಚಿರಬಹುದು ಎಂಬ ಭಯದಿಂದ ಗ್ರಾಮಸ್ಥರು ಹಾಲು ಕುಡಿಯಲು, ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆಂದು ತಿಳಿದುಬಂದಿದೆ.
ಆರೋಗ್ಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ್ದು, ಜನರಲ್ಲಿ ರೇಬಿಸ್ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಶಿಬಿರಗಳನ್ನೂ ನಡೆಸುತ್ತಿದ್ದಾರೆ.
ಈ ನಡುವೆ ಬೆಂಗಳೂರಿನ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಯೊಂದು ಶುಕ್ರವಾರ ಮತ್ತು ಶನಿವಾರ ನಾಲ್ಕು ಗ್ರಾಮಗಳಿಗೆ ಭೇಟಿ ನೀಡಿ ನಾಯಿಗಳ ಹಿಡಿಯಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಬಟ್ಟೂರು ಗ್ರಾಮದಲ್ಲಿ ಕಳೆದ 40 ದಿನಗಳಲ್ಲಿ 20 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಕೆಲ ದಿನಗಳ ಹಿಂದೆ ಬೀದಿ ನಾಯಿ ಕಚ್ಚಿ ಹಸುವೊಂದು ಮೃತಪಟ್ಟಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ ನಾಯಿಗಳು ಹಸುಗಳು ಮತ್ತು ಮೇಕೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದರಿಂದ ಗ್ರಾಮಸ್ಥರು ಆರೋಗ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಾಯಿಗಳಿಗೆ ರೋಗ ತಗುಲಿರುವ ಸಾಧ್ಯತೆಗಳಿವೆ. ಆದರೆ, ಅದು ರೇಬಿಸ್ ಅಲ್ಲ. ಅಧಿಕಾರಿಗಳು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ನಾಯಿ ದಾಳಿ ಬಳಿಕ ಇತ್ತೀಚೆಗೆ 17 ವರ್ಷ ಬಾಲಕಿಯೊಬ್ಬಳು ಕೂಡ ಸಾವನ್ನಪ್ಪಿದ್ದಳು. ಹೀಗಾಗಿ ಆತಂಕ ಹೆಚ್ಚಾಗಿದೆ. ಮನೆಯ ಸಮೀಪ ನಾಯಿಗಳಿಗೆ ಆಹಾರ ನೀಡುತ್ತಿದ್ದ ಬಾಲಕಿಗೆ ನಾಯಿಗಳು ಕಚ್ಚಿದ್ದವು. ಅಸ್ವಸ್ಥಳಾದ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇದೀಗ ಆಕೆ ಸಾವನ್ನಪ್ಪಿದ್ದಾಳೆ. ಆಕೆಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಆರೋಗ್ಯ ಇಲಾಖೆ ಬಾಲಕಿಯ ಸಾವಿಗೆ ಕಾರಣವನ್ನು ಬಹಿರಂಗಪಡಿಸಬೇಕು, ಇಲ್ಲದಿದ್ದರೆ ಜನರಲ್ಲಿ ಆತಂಕ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ನಾಲ್ಕು ಗ್ರಾಮಗಳ ಜನರಿಗೆ ಲಸಿಕೆ ನೀಡುವ ಕೆಲಸ ಪ್ರಾರಂಭವಾಗಿದೆ ಎಂದು ಗದಗ ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್.ನೀಲಗುಂದ ಅವರು ಹೇಳಿದ್ದಾರೆ.