ಸವದತ್ತಿ: ತಿರುಪತಿ ಮಾದರಿಯಲ್ಲಿ ಯಲ್ಲಮ್ಮನ ಗುಡ್ಡಕ್ಕೂ ಅಂತಾರಾಷ್ಟ್ರೀಯ ಮಟ್ಟದ ಆಕರ್ಷಣೆ ತಂದುಕೊಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.
ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಉದ್ಘಾಟಿಸಿ, ಮಂಡಳಿ ಮತ್ತು ಪ್ರಾಧಿಕಾರದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವಸ್ಥಾನ ಹಾಗೂ ಸುತ್ತಮುಲಿನ ಸರಕಾರಿ ಜಮೀನು 1087 ಎಕರೆ ಖಾಲಿ ಜಾಗ ಒತ್ತುವರಿ ಆಗದಂತೆ ತಡೆಯಲು ಕಾಂಪೌಂಡ್ ನಿರ್ಮಿಸಬೇಕು. ಸಂಪೂರ್ಣ ಬಳಸಿಕೊಂಡು ಅಭಿವೃದ್ಧಿ ಪರ್ವ ಆರಂಭಿಸಬೇಕು. ಕ್ಷೇತ್ರಕ್ಕೆ ಬರುವವರಲ್ಲಿ ಬಡವರು, ಮಧ್ಯಮ ವರ್ಗದವರು ಅವರ ವಸತಿಗೆ, ಕುಡಿಯುವ ನೀರು, ಮಹಾಪ್ರಸಾದಕ್ಕೆ, ಎತ್ತಿನ ಬಂಡಿಗಳ ಪಾರ್ಕಿಂಗ್‌ಗೆ, ಎತ್ತುಗಳ ಮೇವು- ನೀರಿಗೆ ಏನೂ ಕೊರತೆ ಆಗದಂತೆ ರೂಪುರೇಷೆ ಸಿದ್ಧಪಡಿಸಬೇಕು.
ವ್ಯಾಪಾರ-ವಹಿವಾಟು ಮಾಡುವ ಜನರಿಗೆ ಪ್ರತ್ಯೇಕ ಜಾಗ ಗುರುತಿಸಿ ಧನ ಸಹಾಯ ಕಲ್ಪಿಸಬೇಕು. ಭಕ್ತರಿಗೆ ಸುಲಭ ದರ್ಶನಕ್ಕೆ ಅವಕಾಶ ಕಲ್ಪಿಸುವುದು ಪ್ರಥಮ ಆದ್ಯತೆಯಾಗಿರಬೇಕು
ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಅವರು ಯಲ್ಲಮ್ಮ ಕ್ಷೇತ್ರಕ್ಕೆ ಆಗಮಿಸುವ ಬಹಳಷ್ಟು ಜನರು ಬಡವರು ಹಾಗೂ ಅನಕ್ಷರಸ್ಥರಾಗಿರುತ್ತಾರೆ. ಆದ್ದರಿಂದ ಸ್ವಚ್ಛತೆ, ವಸತಿ ಹಾಗೂ ಸುಗಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದ್ದು, ಪಿಪಿಪಿ ಮಾದರಿಯಲ್ಲಿವಸತಿ ವ್ಯವಸ್ಥೆ ಮಾಡಲಾಗುವುದು ಮಹಾರಾಷ್ಟ್ರದ ಭಕ್ತರೊಬ್ಬರು ಎರಡು ಎಕರೆ ಜಾಗ ನೀಡಿದರೆ ಮೂರು ಮಹಡಿಯ ವಸತಿ ಸಮುಚ್ಚಯ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ನಾಲ್ಕೈದು ಎಕರೆ ಜಾಗ ಕೊಟ್ಟರೆ ನೂರಾರು ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಹರ್ಷ ಶುಗರ್ಸ್ ಮುಂದೆ ಬಂದಿದೆ. ಮೂರು ಸಾವಿರ ಜನರು ಊಟ ಮಾಡಲು ಸರಕಾರದ ವತಿಯಿಂದಲೇ ದಾಸೋಹ ಭವನ ನಿರ್ಮಿಸಿಕೊಡಬೇಕು ಎಂದು ಸಲಹೆ ನೀಡಿದರು.