ಬೆಂಗಳೂರು: ಬಾಂಗ್ಲಾದೇಶ ವಿರುದ್ಧದ ಯಶಸ್ವಿ ಸರಣಿ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಸಿದ್ಧವಾಗುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಮಳೆ ಭೀತಿ ಆರಂಭವಾಗಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ವರುಣದೇವ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನಾಳೆ ಅಂದರೆ ಅಕ್ಟೋಬರ್ 16ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ರಾತ್ರಿಯಿಂದ ಬೆಂಗಳೂರಿನಲ್ಲಿ ಎಡೆಬೆಡದೆ ಮಳೆಸುರಿಯುತ್ತಿದ್ದು, ಸದ್ಯಕ್ಕಂತು ವರುಣ ದೇವ ಬಿಡುವು ನೀಡುವ ಯಾವುದೇ ಮುನ್ಸೂಚಣೆ ಕಾಣುತ್ತಿಲ್ಲ. ಹೀಗಾಗಿ ಬೆಂಗಳೂರು ಪಂದ್ಯದ ಮೇಲೆ ವರುಣ ಭೀತಿ ಆರಂಭವಾಗಿದೆ.
ಇನ್ನು ಪಂದ್ಯ ನಡೆಯುವ ಅಕ್ಟೋಬರ್ 15ರಿಂದ ಅಕ್ಟೋಬರ್ 20ವರೆಗೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಐದೂ ದಿನಗಳ ಕಾಲ ಕ್ರಿಕೆಟ್ ಆಟಕ್ಕೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆ ಇದೆ.
ಈ ಹಂತದಲ್ಲಿ ಉಭಯ ತಂಡಗಳು ಎದುರಾಗುತ್ತಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಗಳ ಪಟ್ಟಿಯಲ್ಲಿ ಹೆಚ್ಚಿನ ಅಂಕಗಳಿಸಲು ಉಭಯ ತಂಡಗಳೂ ಹವಣಿಸುತ್ತಿವೆ.
ಶ್ರೀಲಂಕಾ ವಿರುದ್ಧದ ಸೋಲಿನ ನಿರಾಸೆಯ ಹಿನ್ನೆಲೆಯಲ್ಲಿರುವ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಭರ್ಜರಿ ಕಮ್ ಬ್ಯಾಕ್ ಮಾಡುವ ಹುಮ್ಮಸ್ಸಿನೊಂದಿಗೆ ಬೆಂಗಳೂರಿಗೆ ಆಗಮಿಸಿದೆ.