ಬೆಂಗಳೂರು: ನೆಟ್ಟಕಲ್ ಸಮತೋಲನ ಅಣೆಕಟ್ಟಿನಿಂದ ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್‌ಗಳ ಮೂಲಕ ನಗರದ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 110 ಹಳ್ಳಿಗಳಲ್ಲಿನ 50 ಲಕ್ಷ (ಶೇ.33ರಷ್ಟು) ಜನರಿಗೆ ಮಹತ್ವಾಕಾಂಕ್ಷಿ ಯೋಜನೆಗೆ ಬುಧವಾರ ಚಾಲನೆ ನೀಡಲಾಗುತ್ತಿದೆ. ಒಟ್ಟು 4 ಲಕ್ಷ ಕಟ್ಟಡಗಳಿಗೆ ನೀರಿನ ಸಂಪರ್ಕ ದೊರೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕಾವೇರಿ 5ನೇ ಹಂತದ ಯೋಜನೆಯಡಿ 775 ಎಂಎಲ್‌ಡಿ ನೀರು ಲಭ್ಯವಾಗುತ್ತಿದ್ದು, ನಗರಕ್ಕೆ ನಿತ್ಯ ಪೂರೈಕೆಯಾಗುವ ನೀರಿನ ಪ್ರಮಾಣವು ಒಟ್ಟಾರೆ 2,225 ಎಂಎಲ್‌ಡಿಗೆ (2.4 ಟಿಎಂಸಿ) ಏರಿಕೆಯಾಗಲಿದೆ.
ಸುಮಾರು 450 ಮೀಟರ್ ಎತ್ತರದಲ್ಲಿರುವ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದ್ದು, ಇದು ಐಫೆಲ್ ಟವರ್‌ಗಿಂತ ಹೆಚ್ಚು ಎತ್ತರದಲ್ಲಿದೆ.
ಕಾವೇರಿ 5ನೇ ಹಂತದ ಯೋಜನೆಗೆ 4,300 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿತ್ತು.
ನೀರಿನ ಸೋರಿಕೆ, ಕಳವು, ವಸತಿ ಉದ್ದೇಶಕ್ಕೆ ಸಂಪರ್ಕ ಪಡೆದು ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ನೀರು ಬಳಸುವುದು, ಮೀಟರ್ ಇಲ್ಲದೆಯೇ ನೀರು ಪಡೆಯುವುದಕ್ಕೆ ಕಡಿವಾಣ ಹಾಕಲಾಗುವುದು. ಕಳೆದ ಬೇಸಿಗೆಯಿಂದ ಪಾಠ ಕಲಿತಿದ್ದು, ನೀರಿನ ಮಿತ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುವುದು.
ಮನಸೋಇಚ್ಛೆ ನೀರು ಬಳಸುವುದಕ್ಕೆ ಕಡಿವಾಣ ಹಾಕಿ, ಬೇಡಿಕೆಗೆ ಅನುಗುಣವಾಗಿ ಅಗತ್ಯವಿರುವಷ್ಟು ನೀರು ಪೂರೈಸಲು ಸ್ಕಾಡ ತಂತ್ರಜ್ಞಾನ ಅಳವಡಿಸಲಾಗುತ್ತಿದೆ,” ಎಂದು ಹೇಳಿದರು.
ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಪ್ರಾಯೋಗಿಕವಾಗಿ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ಎತ್ತಿನಹೊಳೆಯಿಂದ 2.5 ಟಿಎಂಸಿ ಹಂಚಿಕೆಯಾಗಿದ್ದು, ಅಲ್ಲಿಂದ ನೀರು ಬಂದ ನಂತರ ಯುದ್ಧೋಪಾದಿಯಲ್ಲಿಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
”ನೀರಿನ ಸಂಪರ್ಕ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ, ಕಾರ್ಯಕ್ರಮದ ದಿನದಂದೇ ಅರ್ಜಿ ಸಲ್ಲಿಸಿ ಸಂಪರ್ಕ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ,” ಎಂದು ಹೇಳಿದರು.
ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಇದಲ್ಲದೆ, ಮೇಕೆದಾಟು ಸೇರಿದಂತೆ ಇನ್ನಿತರೆ ಮೂಲಗಳಿಂದಲೂ ನೀರು ತರುವ ಸಂಬಂಧ ಚರ್ಚೆಗಳು ನಡೆದಿವೆ,” ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.