ಮಡಿಕೇರಿ: ಗ್ರಾಮದಲ್ಲಿ ಜಾನುವಾರುಗಳ ಮೇಲೆ ಕಳೆದ 3 ದಿನಗಳಿಂದ ದಾಳಿ ಮಾಡಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹುಲಿಯು ಅರಣ್ಯ ಪ್ರದೇಶಕ್ಕೆ ಮರಳಿರುವ ಹೆಜ್ಜೆ ಗುರುತುಗಳನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಬೀರುಗ ಗ್ರಾಮದ ಪಾಚಿಬೇಲ್ ಮೂಲಕ ಬ್ರಹ್ಮಗಿರಿ ಅಭಯಾರಣ್ಯಕ್ಕೆ ಹುಲಿ ತೆರಳಿರುವ ಸ್ಥಳದಲ್ಲಿ ಪತ್ತೆಯಾಗಿರುವ ಹುಲಿ ಹೆಜ್ಜೆ ಪರಸ್ಪರ ಹೊಂದಾಣಿಕೆಯಾಗುತ್ತಿದೆ. ಆದ್ದರಿಂದ ಇದನ್ನು ವೈಜ್ಞಾನಿಕವಾಗಿಯೂ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಈ ಹಿನ್ನೆಲೆ ಸ್ಥಳದಲ್ಲಿರುವ ಸಾಕಾನೆ, ಕ್ಷಿಪ್ರ ಕಾರ್ಯಪಡೆ, ಕಾಡಾನೆ ಟಾಸ್ಕ್ ಪೋರ್ಸ್‌ನ್ನು ಕಾರ್ಯಾಚರಣೆಯಿಂದ ಹಿಂದೆ ಪಡೆಯುವುದರಿಂದ ಶ್ರೀಮಂಗಲ ವನ್ಯಜೀವಿ ವಿಭಾಗದ ವಲಯರಣ್ಯಾಧಿಕಾರಿ ಅರವಿಂದ್ ಅವರ ನೇತೃತ್ವದಲ್ಲಿ ತಂಡವೊಂದು ಹುಲಿ ಚಲನವಲನದ ಮೇಲೆ ನಿಗಾ ಇಡುತ್ತದೆ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಾನೂನು ಸಲಹೆಗಾರರು ಮತ್ತು ಶಾಸಕ ಎ.ಎಸ್.ಪೊನ್ನಣ್ಣ ಅವರು ಅರಣ್ಯ ಸಚಿವರು ಮತ್ತು ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಅರವಳಿಕೆ ನೀಡಿ ಹುಲಿ ಸೆರೆ ಹಿಡಿಯಲು ಅನುಮತಿ ದೊರಕಿಸಿದ್ದರು.