2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ ರಾಮನಗರ, ಮಂಡ್ಯ ಹಾಗೂ ಮೈಸೂರು ಭಾಗದ ಜನಪ್ರತನಿಧಿಗಳ ತಂಡವು ಮನವಿ ಮಾಡಿದೆ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಿದರೆ ಈ ಭಾಗದ ಜನತೆಗೆ ಅನುಕೂಲವಾಗುವುದರ ಜೊತೆಗೆ ಬೆಂಗಳೂರು ದಕ್ಷಿಣ ಭಾಗವೂ ವಾಣಿಜ್ಯ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಲಿದೆ.
ಬೆಂಗಳೂರು ನಗರದ ನಂತರದಲ್ಲಿ ಎರಡನೇ ಐಟಿ ನಗರವಾಗಿ ಮೈಸೂರು ನಗರ ಹೊರಹೊಮ್ಮುತ್ತಿದೆ. ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಮೈಸೂರಿಗೆ ಬೆಂಗಳೂರಿನಿಂದ ಸಂಚರಿಸುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಪ್ರಯಾಣಿಕರ ಸಂಚಾರಕ್ಕೆ ವರದಾನವಾಗಿದೆ.
ಕಾವೇರಿ ನದಿ ತಪ್ಪಲಿನ ಈ ಭಾಗದಲ್ಲಿ ನೀರಿನ ಸೌಕರ್ಯ ಕೂಡ ಚೆನ್ನಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಬಿಡದಿ ಕೈಗಾರಿಕಾ ಪ್ರದೇಶವಿದ್ದು ಟೊಯೋಟಾ ಕಿರ್ಲೋಸ್ಕರ್ ನಂತಹ ಕಾರು ತಯಾರಿಕಾ ಕಂಪನಿ ಜೊತೆಗೆ ನಾನಾ ಪ್ರಮುಖ ಕೈಗಾರಿಕೆಗಳನ್ನು ಹೊಂದಿರುವ ಬಿಡದಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿದೆ. ಶಿಕ್ಷಣ ಸಂಸ್ಥೆಗಳು, ಹೈಟೆಕ್ ಆಸ್ಪತ್ರೆ, ಸ್ಟಾರ್ ಹೋಟೆಲ್, ರೆಸಾರ್ಟ್ ಗಳನ್ನು ಒಳಗೊಂಡಿರುವ ಬೆಂಗಳೂರು ದಕ್ಷಿಣ ಭಾಗದಲ್ಲಿ ಸುಸಜ್ಜಿತ ರಸ್ತೆ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯವನ್ನು ಕೂಡ ಒಳಗೊಂಡಿದೆ.
ಯಾವುದೇ ಸಂಚಾರ ದಟ್ಟಣೆ ಇಲ್ಲದ ಮೈಸೂರು ರಸ್ತೆಯಲ್ಲಿ ಅಗತ್ಯವಾದ ಭೂಮಿ ಜೊತೆಗೆ ಉತ್ತಮ ವಾತಾವರಣವಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದಲ್ಲಿ ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವುದರ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ.
ಈ ಕಾರಣದಿಂದ ಬೆಂಗಳೂರು ನಗರದ ಸಮೀಪದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಅವಶ್ಯಕತೆಯಿದ್ದು ಈ ಸಂಬಂಧ ಈಗಾಗಲೇ ಜಾಗ ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ.
ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಬನ್ನೇರುಘಟ್ಟ ರಸ್ತೆ, ಜಯನಗರ, ಜೆ.ಪಿ.ನಗರ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವುದರಿಂದ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಿದರೆ ಈ ಭಾಗದ ಜನತೆಗೆ ಅನುಕೂಲವಾಗುವುದರ ಜೊತೆಗೆ ಬೆಂಗಳೂರು ದಕ್ಷಿಣ ಭಾಗವೂ ವಾಣಿಜ್ಯ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಲಿದೆ.
ಬೆಂಗಳೂರು ದಕ್ಷಿಣ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದು ಸೂಕ್ತವೆಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕೆಂದು ಈ ಮೂಲಕ ಕೋರಲಾಗಿದೆ.
ಮುಂಬೈ ನಂತರದಲ್ಲಿ ಪುಣೆ ಹೇಗೆ ವಾಣಿಜ್ಯ ನಗರಿಯಾಗಿ ಮಾರ್ಪಟಿತ್ತೋ ಅದೇ ಮಾದರಿಯಲ್ಲಿ ಬೆಂಗಳೂರು ನಂತರದಲ್ಲಿ ಮೈಸೂರು ಕೂಡ ವಾಣಿಜ್ಯ ನಗರಿಯಾಗಿ ಹೊರಹೊಮ್ಮಲು ಸಹಕಾರಿಯಾಗಲಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ .
ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಕೂಡ ಬಿಡದಿಗೆ ಹೊಂದಿಕೊಂಡಿರುವುದರಿಂದ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೈಸೂರು ರಸ್ತೆಯಲ್ಲಿ ಮಾಡಿದರೆ ಸೂಕ್ತವಾಗಿರಲಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now