ಬೆಂಗಳೂರು: ಬೆಳಕಿನ ಹಬ್ಬದ ಪ್ರಯುಕ್ತ ರಾಜಧಾನಿಯಲ್ಲಿ ಪಟಾಕಿ ದರ ಹೆಚ್ಚಳವಾಗಿದ್ದರೂ ಜನರು ಸಹ ಪಟಾಕಿ ಖರೀದಿಗೆ ಮುಗಿ ಬಿದ್ದಿದ್ದಾರೆ.
ಬೆಂಗಳೂರಿನಲ್ಲಿಯೂ ಪಟಾಕಿಗಳಿಗೆ ಭಾರೀ ಬೇಡಿಕೆಯಿದೆ.
ಮಲ್ಲೇಶ್ವರಂ, ವಿದ್ಯಾಪೀಠ, ಜಯನಗರ 7ನೇ ಬ್ಲಾಕ್, ಚಾಮರಾಜಪೇಟೆ, ಜೆ.ಪಿ.ನಗರ, ಎಚ್‌ಎಸ್‌ಆರ್ ಲೇಔಟ್, ಕೆ.ಆರ್.ಮಾರುಕಟ್ಟೆ, ಗಾಂನಗರ, ದಾಸರಹಳ್ಳಿ ಹಾಗೂ ನಗರದ ವಿವಿಧೆಡೆ ಇರುವ 68 ಆಟದ ಮೈದಾನಗಳಲ್ಲಿ 315 ಮಳಿಗೆಗಳಿಗೆ ಬಿಬಿಎಂಪಿ ಮತ್ತು ನಗರ ಪೊಲೀಸ್ ಇಲಾಖೆ ಅನುಮತಿ ನೀಡಿದ್ದು, ಆ ಪ್ರಾಂತ್ಯಗಳಲ್ಲಿನ ಆಟದ ಮೈದಾನಗಳಲ್ಲಿ ಪಟಾಕಿ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.
ಕೆಲವೆಡೆ ಗುರುವಾರ ಪಟಾಕಿ ಮಾರಾಟ ಭರಾಟೆ ಜೋರಾಗುವ ಸಾಧ್ಯತೆ ಇದೆ. ಶಬ್ದ ಮಾಡುವ ಪಟಾಕಿಗಳ ಮಾರಾಟಕ್ಕೆ ಬೇಡಿಕೆ ಕಡಿಮೆಯಿದ್ದು, ಸುರ್ ಸುರ್ ಬತ್ತಿ, ಭೂಚಕ್ರ, ಹೂ ಕುಂಡ, ವಿಷ್ಣು ಚಕ್ರ, ಆನೆ ಪಟಾಕಿ, ರಾಕೆಟ್ ಸೇರಿದಂತೆ ವಿವಿಧ ಹಸಿರು ಪಟಾಕಿಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಒಲವು ತೋರುತ್ತಿದ್ದಾರೆ.
ಬೆಂಗಳೂರಿನ ಬಸವನಗುಡಿ, ಗಾಂ ಬಜಾರ್, ಕೆ.ಆರ್.ಮಾರುಕಟ್ಟೆ, ಜಯನಗರ ಮತ್ತಿತರ ಕಡೆ ಹಬ್ಬದ ವಿಶೇಷವಾಗಿ ಸಣ್ಣ ಅಳತೆಯ ಮಣ್ಣಿನ ದೀಪಗಳ ಮಾರಾಟ ಹೆಚ್ಚಾಗಿದೆ. ಒಂದು ಡಜನ್ ಮಣ್ಣಿನ ಹಣತೆಗೆ 50 ರಿಂದ 60 ರೂ.ವರೆಗೆ ಬೆಲೆ ಇದ್ದರೆ, ಸ್ವಲ್ಪ ದೊಡ್ಡ ಅಳತೆಯ ಮಣ್ಣಿನ ಹಣತೆಗೆ 100ರಿಂದ 120 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
ಶೇ.90ರಷ್ಟು ಪಟಾಕಿಗಳು ಹೊಸೂರಿನಿಂದ ಬಂದಿವೆ. ಮಂಗಳವಾರ ಮಳಿಗೆಗಳನ್ನು ಹಾಕಲಾಗಿದೆ. ಸಂಜೆ ಮತ್ತು ಗುರುವಾರ ಹೆಚ್ಚು ಪಟಾಕಿ ಮಾರಾಟವಾಗುವ ನಿರೀಕ್ಷೆಯಿದೆ. ಶೇ.10ರಿಂದ 12ರಷ್ಟು ಪಟಾಕಿ ಬೆಲೆ ಹೆಚ್ಚಳವಾಗಿದೆ.
ನಕ್ಷತ್ರ ಮಾದರಿ, ಕಂದೀಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿಗಳು ಗ್ರಾಹಕರ ಮನಸೆಳೆಯುತ್ತಿವೆ. 100 ರೂ.ನಿಂದ 2000 ರೂ. ಮುಖಬೆಲೆಯ ಆಕಾಶ ಬುಟ್ಟಿಗಳು ಮಾರಾಟವಾಗುತ್ತಿವೆ.
ಪಟಾಕಿಯ ಜತೆಗೆ ಬಣ್ಣ ಬಣ್ಣದ ಆಕಾಶ ಬುಟ್ಟಿಗಳ ಖರೀದಿ ಜೋರಾಗಿಯೇ ಇದೆ. ಆಕಾಶದಲ್ಲಿ ದೀಪ ಬೆಳಗುತ್ತಾ ಸ್ವಚ್ಛಂದವಾಗಿ ಹಾರಾಡುವ ವೈವಿಧ ವಿನ್ಯಾಸಗಳ ಆಕಾಶಬುಟ್ಟಿಗಳನ್ನು ಕೊಳ್ಳುತ್ತಿದ್ದಾರೆ.