ವಿಜಯಪುರ: ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವ್ ಆಗಬೇಕು ಎಂದು ವಕ್ಫ ಬೋರ್ಡ್ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ವಕ್ಫ್ ಬೋರ್ಡ್ ನಿಂದ ರೈತರು, ಮಠ ಮಾನ್ಯಗಳಿಗೆ ನ್ಯಾಯ ಸಿಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಸೋಮವಾರ (ನ.04) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿರೋಧಿಸಿ ಇಂದು ಕಿಸಾನ್ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗುವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಜಮೀರ್ ರಾಜ್ಯದ ಎಲ್ಲ ಭೂಮಿ ವಕ್ಫ್ ಅಡಿಯಲ್ಲಿ ತರಲು ಹೊರಟಿದ್ದಾರೆ ಎಂದು ಆರೋಪಿಸಿದರು.
ವಕ್ಫ್ ಬೋರ್ಡ್ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ಉಳಿಸಿ ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವ್ ಆಗಬೇಕು. ರಾಜ್ಯದಲ್ಲಿ ಕಾನೂನು ಬಾಹಿರವಾಗಿ ವಕ್ಫ್ ಅದಾಲತ್ ಮಾಡುತ್ತಿದ್ದಾರೆ. ಯಾವ ಕಾನೂನು ಅಡಿ ವಕ್ಫ್ ಅದಾಲತ್ ಮಾಡುತ್ತಿದ್ದಾರೆ? ಲ್ಯಾಂಡ್ ಜಿಹಾದ್ ಗೆ ಜಮೀರ್ ಮುಂದಾಗಿದ್ದಾರೆ.
ಇದನ್ನು ಸಹಿಸಲ್ಲ. ನ್ಯಾಯ ಸಿಗುವವರಿಗೂ ನಮ್ಮ ಹೋರಾಟ ನಡೆಯಲಿದೆ. ರೈತರಿಗೆ ನೀಡಿದ್ದ ನೋಟಿಸ್ ರದ್ದು ಮಾಡಬೇಕು. ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್ ಹೆಸರು ತೆಗೆಯಬೇಕು ಎಂದು ಒತ್ತಾಯಿಸಿದರು.
ಉಡುಪಿಯ ಶಿವಳ್ಳಿ ಎಂಬ ಗ್ರಾಮ ಸುಲ್ತಾನಪುರ ಗ್ರಾಮ ಎಂದು ದಿಶಾಂಕ ಆಯಪ್ ನಲ್ಲಿ ತೋರಿಸುತ್ತಿದೆ. ಇದರಿಂದ ಆತಂಕದ ವಾತಾವರಣ ಮನೆ ಮಾಡಿದೆ. ಐತಿಹಾಸಿಕ ಸ್ಮಾರಕಗಳು ಸಹ ವಕ್ಫ್ ಎಂದಾಗಿದೆ. ವಿಜಯಪುರದ ಡಿಸಿ, ಎಸ್ಪಿ ಕಚೇರಿ, ಜಿಲ್ಲಾಸ್ಪತ್ರೆ ಹಾಗೂ ಇತರೆ ದೇವಸ್ಥಾನಗಳು ವಕ್ಫ್ ಎಂದಾಗಿದೆ. ದಾನದ ಮೂಲಕ ವಕ್ಫ್ ಗೆ ಬರಬೇಕು. ಆದರೆ, ಇವೆಲ್ಲಾ ಹೇಗೆ ವಕ್ಫ್ ಎಂದಾದವು ಎಂದು ಪ್ರಶ್ನಿಸಿದರು.
1974ರ ಗೆಜೆಟ್ ನೊಟಿಫಿಕೇಷನ್ ಸಂಪೂರ್ಣ ರದ್ದಾಗಬೇಕು. ಇದು ರದ್ದಾಗುವವರೆಗೂ ಹೋರಾಟ ಮಾಡುತ್ತೇವೆ. ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆಯುವ ಅಹೋರಾತ್ರಿ ಧರಣಿಯಲ್ಲಿ ನಾನೂ ಭಾಗಿಯಾಗುವೆ. ರಾಜ್ಯದ ಹಲವಾರು ದೇವಸ್ಥಾನಗಳು ವಕ್ಪ್ ಎಂದಾಗಿವೆ. ಇದು ಯಾವ ಷಡ್ಯಂತ್ರ ಎಂದು ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಸಂವಿಧಾನದಲ್ಲಿ ವಕ್ಫ್ ಉಲ್ಲೇಖ ಇಲ್ಲ. 1954-55ರಲ್ಲಿ ನೆಹರು ವಕ್ಫ್ ಸೇರಿಸಿದ್ದಾರೆ. ಇಲ್ಲಿ ಜಮೀನು ವಕ್ಫ್ ದ್ದು ಅಲ್ಲ. ಮಠಗಳಿಗೆ ಚಾಲುಕ್ಯರು ಹೊಯ್ಸಳರು, ಕಿತ್ತೂರು ರಾಣಿ ಚೆನ್ನಮ್ಮ ಇಲ್ಲಿನ ಜಮೀನು ಕೊಟ್ಟದ್ದು, ಇಂಥವನ್ನೂ ವಕ್ಫ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಷರಿಯತ್ ಕಾನೂನನ್ನು ರಾಜ್ಯದಲ್ಲಿ ತರಲು ಸಿದ್ದರಾಮಯ್ಯ ಹಾಗೂ ಜಮೀರ್ ಹೊರಟಿದ್ದಾರೆ ಎಂದು ಆರೋಪಿಸಿ ಅವರು, ನಾವು ಭಾರತದ ಸಂವಿಧಾನದ ಪ್ರಕಾರ ನಡೆಯುವವರು, ಲೋಕಸಭೆಯಲ್ಲಿ ಸಂವಿಧಾನ ಪ್ರತಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕಾರ ಮಾಡುತ್ತೀರಿ. ಇಲ್ಲಿ ಬಂದು ಷರಿಯತ್ ಕಾನೂನು ತರುತ್ತೀರಿ. ಕರ್ನಾಟಕದಲ್ಲಿ ಇದು ನಡೆಯಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now