ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಕಾರಣ ಅಮೆರಿಕನ್ ಪ್ರಜೆಯಾಗಿರುವ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮತ ಚಲಾಯಿಸಲಿದ್ದಾರೆ.
ಪ್ರತಿಯೊಬ್ಬರೂ ಮತ ಚಲಾಯಿಸಬೇಕು, ಅದು ಅವರ ಹಕ್ಕು ಮತ್ತು ಕರ್ತವ್ಯ ಎಂದು ನಾಸಾ ಬಾಹ್ಯಾಕಾಶದಿಂದ ಮತ ಚಲಾವಣೆಗೆ ಅನುವು ಮಾಡಿ ಕೊಟ್ಟಿದೆ. 1997 ರಿಂದ ಈ ಯೋಜನೆಯನ್ನು ನಾಸಾ ಜಾರಿಗೊಳಿಸಿದೆ.
ಭೂಮಿಯ ಮೇಲ್ಮೈಯಿಂದ ಸರಿಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಸುನಿತಾ ವಿಲಿಯಮ್ಸ್ ತನ್ನ ಪ್ರಜಾಪ್ರಭುತ್ವದ ಹಕ್ಕನ್ನು ಹೇಗೆ ಚಲಾಯಿಸುತ್ತಾರೆ ಎಂದು ನಾಸಾ ತಿಳಿಸಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಸುನಿತಾ ಬಾಹ್ಯಾಕಾಶದಲ್ಲಿ ಮತದಾನ ಮಾಡುವ ಉತ್ಸಾಹವನ್ನು ಹಂಚಿಕೊಂಡಿದ್ದರು. ನಾನು ಚುನಾವಣೆಯ ವೇಳೆಗೆ ಖುದ್ದಾಗಿ ಭೂಮಿಗೆ ಬರಬೇಕಿತ್ತು ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ. ಆದರೂ ಬಾಹ್ಯಾಕಾಶದಿಂದ ಮತಚಲಾಯಿಸುತ್ತಿರುವುದು ಒಂದು ಅದ್ಭುತ ಅನುಭವಾವಗಿದೆ ಎಂದು ಹೇಳಿದ್ದರು.
ಮೊದಲು ಫೆಡರಲ್ ಪೋಸ್ಟ್ ಕಾರ್ಡ್ ಅರ್ಜಿಯನ್ನು ತುಂಬಬೇಕಾಗುತ್ತದೆ. ನಂತರ ಬಾಹ್ಯಾಕಾಶದಲ್ಲಿ ಎಲೆಕ್ಟ್ರಾನಿಕ್ ಮತಪತ್ರವನ್ನು ತುಂಬುತ್ತಾರೆ.
ನಾಸಾದ ಟ್ರ್ಯಾಕಿಂಗ್ ಮತ್ತು ಡೇಟಾ ರಿಲೇ ಸ್ಯಾಟಲೈಟ್ ಸಿಸ್ಟಮ್ ಮೂಲಕ ನ್ಯೂ ಮೆಕ್ಸಿಕೋದಲ್ಲಿನ ಏಜೆನ್ಸಿಯ ಪರೀಕ್ಷಾ ಸೌಲಭ್ಯದಲ್ಲಿರುವ ಆಂಟೆನಾಕ್ಕೆ ಕಳುಹಿಸಲಾಗುತ್ತದೆ.
ಬಾಹ್ಯಾಕಾಶದಿಂದ ಮತ ಚಲಾಯಿಸುವವರು ವಿದೇಶದಿಂದ ಮತ ಚಲಾಯಿಸುವ ಇತರ ಅಮೆರಿಕ ನಾಗರಿಕರು ಬಳಸುವ ವಿಧಾನವನ್ನು ಬಳಸುತ್ತಾರೆ.
1997 ರಲ್ಲಿ ಡೇವಿಡ್ ವುಲ್ಫ್ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಮತ ಚಲಾಯಿಸಿದರು ಮತ್ತು NASA ಪ್ರಕಾರ 2020 ರ US ಚುನಾವಣೆಯ ಸಮಯದಲ್ಲಿ ಕೇಟ್ ರೂಬಿನ್ಸ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮತ ಚಲಾಯಿಸಿದ ಕೊನೆಯ ಗಗನಯಾತ್ರಿಯಾಗಿದ್ದರು. ಇದೀಗ ಆ ಪಟ್ಟಿಗೆ ಸುನಿತಾ ಹಾಗೂ ಸಂಗಡಿಗರು ಸೇರ್ಪಡೆಗೊಳ್ಳಲಿದ್ದಾರೆ.