ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಓರ್ವ ಮುಸ್ಲಿಮ್ ಸಮುದಾಯದ ಮೇಧಾವಿ ಎನ್ನುವುದು ಅಚ್ಚರಿ ಮತ್ತು ಕುತೂಹಲಕರ ಸಂಗತಿ.
ಮುಸ್ಲಿಮ್ ಸಮುದಾಯ ಬಹುಪಾಲು ಆಧುನಿಕ ಶಿಕ್ಷಣಕ್ಕೆ ತಮ್ಮನ್ನು ತಾವು ತೆರೆದುಕೊಂಡದ್ದು ಇತ್ತೀಚಿನ ವರ್ಷಗಳಲ್ಲಿ
ಈ ಸಮುದಾಯದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಜಾಗೃತಿ ಇಂದಿಗೂ ನಡೆಯುತ್ತಲೇ ಇದೆ.
ಉನ್ನತ ವಿದ್ಯಾಭ್ಯಾಸ ಪಡೆಯುವಂತೆ, ವಿಜ್ಞಾನ ತಂತ್ರಜ್ಞಾನಗಳ ಕಡೆಗೆ ಆಸಕ್ತಿ ವಹಿಸುವಂತೆ, ನಾಗರಿಕ ಸೇವಾ ಪರೀಕ್ಷೆಗಳ ಕಡೆಗೆ ಮುಖ ಮಾಡುವಂತೆ, ಐಐಟಿ, ಐಐಎಸ್ಸಿಗಳ ಬಗ್ಗೆ ಕುತೂಹಲ ಬೆಳೆಸುವಂತೆ ಸಮುದಾಯದ ವಿದ್ಯಾರ್ಥಿಗಳಿಗೆ ಬಲ್ಲವರು ಉತ್ತೇಜನ ನೀಡುತ್ತಲೇ ಇದ್ದಾರೆ
ದಕ್ಷಿಣ ಭಾರತದಲ್ಲಿ ಹೈದರಾಬಾದ್ ಮತ್ತು ತಿರುವಾಂಕೂರು ಪ್ರಾಂತಗಳನ್ನು ಹೊರತುಪಡಿಸಿದರೆ ಇತರ ಭಾಗಗಳಲ್ಲಿ ಮುಸ್ಲಿಮ್ ಸಮುದಾಯ ಆಧುನಿಕ ಶಿಕ್ಷಣದ ಕಡೆಗೆ ಒಲವು ತೋರಿದ್ದು ಬಹಳ ತಡವಾಗಿ ಎನ್ನಬಹುದು. ಆದರೂ ಉತ್ತರ ಭಾರತದಲ್ಲಿ ಮುಸ್ಲಿಮ್ ಸಮುದಾಯದ ಮುಂದಾಳುಗಳು ಸ್ವಾತಂತ್ರ್ಯಪೂರ್ವದಲ್ಲಿಯೇ ಶಾಲಾ-ಕಾಲೇಜಿನ ಶಿಕ್ಷಣ ಪಡೆಯುವಂತೆ ಜನರಲ್ಲಿ ನಿರಂತರ ಜಾಗೃತಿ ಮೂಡಿಸಿದ ಫಲವಾಗಿ ಬಹಳಷ್ಟು ವಿದ್ವಾಂಸರು, ಮೇಧಾವಿಗಳು ಆ ಭಾಗದಲ್ಲಿ ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ಸಮುದಾಯದ ಸಬಲೀಕರಣ ಈ ಎರಡೂ ಕೈಂಕರ್ಯದಲ್ಲಿ ಏಕಕಾಲದಲ್ಲಿ ತೊಡಗಿದರು ಎನ್ನುವುದು ಗಮನಾರ್ಹ ಸಂಗತಿ.
ಉತ್ತರ ಭಾರತದಲ್ಲಿ ಅಂದಿನ ವಿದ್ವಾಂಸರು ಉರ್ದು, ಅರಬಿಕ್, ಹಿಂದಿ, ಇಂಗ್ಲಿಷ್, ಪರ್ಷಿಯನ್‌ನಂತಹ ಬಹುಭಾಷೆಗಳ ಕಲಿಕೆಗೆ ಒತ್ತು ನೀಡಿದರು. ಇದರಿಂದ ಜನಸಾಮಾನ್ಯರನ್ನು ಹೊರತುಪಡಿಸಿ ಅಂದು ಆರ್ಥಿಕವಾಗಿ ಸಬಲರು, ಶೈಕ್ಷಣಿಕ ಕಳಕಳಿಯುಳ್ಳ ಪೋಷಕರು, ದೇಶದ ಸ್ವಾತಂತ್ರ್ಯದ ಚಳವಳಿಯನ್ನು ಬದುಕಿನ ಭಾಗವಾಗಿ ಕಂಡ ಮೌಲಾನಾಗಳು, ಸಮುದಾಯದ ಸಬಲೀಕರಣಕ್ಕೆ ಶಿಕ್ಷಣವೇ ಅಸ್ತ್ರ ಎಂದು ಮನಗಂಡ ವಿದ್ವಾಂಸರು ತಾವು ಮಾತ್ರವಲ್ಲದೆ ತಮ್ಮ ಮಕ್ಕಳು ಹಾಗೂ ಸಮುದಾಯದ ಇತರರಲ್ಲಿಯೂ ಆಧುನಿಕ ಶಿಕ್ಷಣದ ಒಲವನ್ನು ಬಿತ್ತಿದರು. ಈ ಕಾರಣದಿಂದಲೇ ಅಂದಿನ ಬಹುತೇಕ ಮೌಲಾನಾಗಳು ಧಾರ್ಮಿಕ ಶಿಕ್ಷಣ ಮಾತ್ರವಲ್ಲದೆ ಆಧುನಿಕ ಶಿಕ್ಷಣದಲ್ಲಿಯೂ ಪಾರಂಗತರಾಗಿದ್ದರು.
ತಮ್ಮ ಮಾತೃಭಾಷೆ ಉರ್ದು ಅಥವಾ ಪರ್ಶಿಯನ್ ಜೊತೆಗೆ ಅರಬಿಕ್ ಮತ್ತು ಇಂಗ್ಲಿಷ್ ಭಾಷೆಗಳ ಕಲಿಕೆಗೆ ಒತ್ತು ನೀಡಿದರು. ಅವರು ಸಂಸ್ಕೃತವನ್ನು ಕೂಡಾ ಪರಕೀಯ ಎನ್ನದೆ ಜ್ಞಾನ ಮತ್ತು ಅಧ್ಯಯನ ದೃಷ್ಟಿಯಿಂದ ಕಲಿತರು. ಇದರ ಫಲವೇ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಉತ್ತರ ಭಾರತದ ಮುಸ್ಲಿಮ್ ನಾಯಕರು ಅದರಲ್ಲೂ ಮೌಲಾನಾಗಳನ್ನು ಕಾಣಲು ಸಾಧ್ಯವಾಯಿತು.