ಬೆಂಗಳೂರು: “ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ” ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟಪಡಿಸಿದೆ.
ಈ ಸಂಬಂಧ ಮಾಧ್ಯಮ ಸ್ಪಷ್ಟನೆ ಹೊರಡಿಸಿರುವ ಸಿಎಂ ಕಚೇರಿ, “ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ” ಎಂದು ತಿಳಿಸಿದೆ.
“ಕಾಂಗ್ರೆಸ್ ಸರ್ಕಾರ ಒಂದು ಕೋಟಿ ರೂ.ವರೆಗಿನ ಕಾಮಗಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವ ಬಗ್ಗೆ ವರದಿಯಾಗಿವೆ. ಈ ಸಂಬಂಧ ಕಾಂಗ್ರೆಸ್ನ ಮುಸ್ಲಿಂ ಶಾಸಕರ ನಿಯೋಗ ಸಿಎಂರನ್ನು ಭೇಟಿಯಾಗಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿದ್ದರು. ಆಗಸ್ಟ್ 24ರಂದು ಕಾಂಗ್ರೆಸ್ ಮುಸ್ಲಿಂ ನಾಯಕರು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದರು. ಈ ಕಡತವನ್ನು ಪರಿಶೀಲಿಸಿ ಮಂಡಿಸಿ ಆರ್ಥಿಕ ಇಲಾಖೆಗೆ ಸೂಚಿಸಿದ್ದರು. ಆರ್ಥಿಕ ಇಲಾಖೆಯೂ ಈ ಸಂಬಂಧ ಪರಿಶೀಲನೆ ನಡೆಸಿದೆ ಎಂದು ಹೇಳಲಾಗಿದೆ.”
ಸಚಿವರಾದ ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ತನ್ವೀರ್ ಸೇಠ್, ಅಬ್ದುಲ್ ಜಬ್ಬಾರ್, ಎನ್. ಎ. ಹ್ಯಾರಿಸ್, ರಿಜ್ವಾನ್ ಅರ್ಷದ್, ಆಸೀಪ್ ಸೇಠ್, ಖನೀಜಾ ಫಾತಿಮಾ, ಇಕ್ಬಾಲ್ ಹುಸೇನ್, ಬಲ್ಕೀಶ್ ಬಾನು ಅವರು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದರು. ಕಾಮಗಾರಿಯಲ್ಲಿ 4% ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದರು.
ಅಲ್ಪಸಂಖ್ಯಾತರ ಪ್ರವರ್ಗ 2ಬಿಗೆ 4% ಮೀಸಲಾತಿ ನೀಡುವಂತೆ ಮನವಿ ಮಾಡಿದ್ದರು. ಈಗಾಗಾಲೇ ಎಸ್ಸಿ, ಎಸ್ಟಿಗೆ ಗುತ್ತಿಗೆಯಲ್ಲಿ 1 ಕೋಟಿ ರೂ.ವರೆಗೆ ಮೀಸಲಾತಿ ನೀಡಲಾಗುತ್ತಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ 24% ಗುತ್ತಿಗೆ ಮೀಸಲಾತಿ ನೀಡಲಾಗಿದೆ. OBC ಸಮುದಾಯಕ್ಕೆ 4% ಗುತ್ತಿಗೆ ಮೀಸಲಾತಿ ನೀಡಲಾಗಿದೆ. 2A ಅಡಿ 15% ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ. ಒಟ್ಟು ಸರ್ಕಾರದ ಕಾಮಗಾರಿಗಳಲ್ಲಿ 43% ಮೀಸಲಾತಿ ನೀಡಲಾಗುತ್ತಿದೆ. ಈಗ ಮುಸ್ಲಿಂ ಸಮುದಾಯಕ್ಕೂ ಸರ್ಕಾರದ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡಲು ಚಿಂತನೆ ಮಾಡಲಾಗಿದೆ. ಆ ಮೂಲಕ ಕಾಮಗಾರಿಗಳಲ್ಲಿ ಮೀಸಲಾತಿ 47%ಗೆ ಏರಿಕೆಯಾಗಲಿದೆ. ಈ ಸಂಬಂಧ ಕೆಟಿಪಿಪಿ ಕಾಯ್ದೆಯ 1999ರ 6ನೇ ಪ್ರಕರಣಕ್ಕೆ ತಿದ್ದುಪಡಿ ಮಾಡಲಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವ ಟಿಪ್ಪಣಿಯೂ ಹರಿದಾಡುತ್ತಿದೆ.