KL Rahul: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕನಾಗಿ ಕೆಲಕಾಲ ಆ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆ.ಎಲ್.ರಾಹುಲ್ ಈ ಬಾರಿ ಐಪಿಎಲ್ ಮೆಗಾ ಹರಾಜು(IPL Mega Auction) ಪ್ರವೇಶಿಸಲಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಎಲ್‌ಎಸ್‌ಜಿ ಆಸಕ್ತಿ ತೋರಿದ್ದರೂ, ರಾಹುಲ್ ಅದನ್ನು ನಿರಾಕರಿಸಿ ತಂಡದಿಂದ ಹೊರಬಂದಿದ್ದಾರೆ.
ಕಳೆದ ಸೀಸನ್ ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಲಕ್ನೋ ತಂಡ ಹೀನಾಯವಾಗಿ ಸೋಲನುಭವಿಸಿತ್ತು. ಈ ಪಂದ್ಯದ ನಡುವೆ ಅಸಮಾಧಾನ ಹೊರಹಾಕಿದ್ದ ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿಯೇ ರಾಹುಲ್ ವಿರುದ್ಧ ಕೋಪ ಹೊರಹಾಕಿದ್ದರು. ಈ ಘಟನೆಯಿಂದಾಗಿ ಗೊಯೆಂಕಾ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ನಂತರ ರಾಹುಲ್ ಲಕ್ನೋ ಫ್ರಾಂಚೈಸಿಯಿಂದ ದೂರವಿರಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಎಲ್‌ಎಸ್‌ಜಿ ತೊರೆಯಲಿದ್ದಾರೆ ಎಂದು ವರದಿಯಾಗಿದ್ದವು. ಆದರೆ ಈ ಬಗ್ಗೆ ಸ್ವತಃ ರಾಹುಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಕ್ರೀಡಾ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಲಕ್ನೋ ತೊರೆಯುತ್ತಿರುವ ಕುರಿತು ರಾಹುಲ್ ಮಾತನಾಡಿದ್ದಾರೆ. ಲಕ್ನೋವನ್ನು ತೊರೆಯಲು ಕಾರಣಗಳನ್ನು ಬಹಿರಂಗಪಡಿಸಿರುವ ಅವರು, ಈ ಬಾರಿ ನಾನು ಹೊಸ ಫ್ರಾಂಚೈಸಿ ಪರ ಆಡಲು ಬಯಸಿದ್ದೇನೆ. ಅಲ್ಲದೇ ನನಗೆ ಆಟವಾಡಲು ತಂಡದಲ್ಲಿ ಸ್ವಾತಂತ್ರ್ಯ ಬೇಕು. ಅದಕ್ಕಾಗಿಯೇ LSG ತೊರೆಯುತ್ತಿದ್ದೇನೆ.
ತಂಡದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇದ್ರೆ ಮಾತ್ರ ಆಡುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.
ಭಾರತ ಟಿ20 ತಂಡದಿಂದ ಹೊರಗುಳಿದಿರುವ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿರುವ ಅವರು, “ನಾನು ಸ್ವಲ್ಪ ಸಮಯದಿಂದ ಟಿ20 ತಂಡದಿಂದ ದೂರವಿದ್ದೇನೆ. ಆಟಗಾರನಾಗಿ ತಂಡಕ್ಕೆ ಮರಳಲು ಏನು ಮಾಡಬೇಕೆಂದು ತಿಳಿದಿದ್ದೇನೆ. ಅಲ್ಲದೇ ಮುಂಬರುವ ಐಪಿಎಲ್ ಫಾರ್ಮ್ಗೆ ಮರಳಲು ಉತ್ತಮ ವೇದಿಕೆಯಾಗಿದ್ದು ನಾನು ಭಾರತ ಟಿ20 ತಂಡದಲ್ಲಿ ಮತ್ತೆ ಸ್ಥಾನ ಪಡೆಯುತ್ತೇನೆ” ಎಂದು ಹೇಳಿದ್ದಾರೆ.
ಐಪಿಎಲ್ ಮೆಗಾ ಹರಾಜು (IPL Mega Auction) ಈ ವರ್ಷ ನವೆಂಬರ್ 24 ಮತ್ತು 25ರಂದು ನಡೆಯಲಿದೆ. ನಾಯಕ ಮತ್ತು ವಿಕೆಟ್ ಕೀಪರ್ ಆಗಿ ಅನುಭವ ಹೊಂದಿರುವ ರಾಹುಲ್ ಅವರನ್ನು ಖರೀದಿ ಮಾಡಲು ಹಲವರು ಫ್ರಾಂಚೈಸಿಗಳು ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂಬುದು ಕ್ರಿಕೆಟ್ ವಲಯದ ಮಾತಾಗಿದೆ.
ಪ್ರಸ್ತುತ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
ಕನ್ನಡಿಗ ಕೆ.ಎಲ್.ರಾಹುಲ್ ಇದುವರೆಗೆ ಒಟ್ಟು 132 ಪಂದ್ಯಗಳನ್ನು ಆಡಿದ್ದು ಇದರಲ್ಲಿ 4 ಶತಕ, 37 ಅರ್ಧಶತಕ ಸಮೇತ 4,683 ರನ್ ಗಳಿಸಿದ್ದಾರೆ.