ಮೈಸೂರು: ಮುಡಾದಲ್ಲಿ ಸಕಾಲದಲ್ಲಿ ಮೂಲ ಸೌಲಭ್ಯಗಳು ದೊರಕದೆ, ಕಂದಾಯ ಕಟ್ಟುವುದು, ಖಾತೆ ನೋಂದಣಿಯಂತಹ ಕಾರ್ಯಗಳು ನಡೆಯದೆ ಪರದಾಡುತ್ತಿರುವ ಮೈಸೂರಿನ ಖಾಸಗಿ ಬಡಾವಣೆಗಳ ನಿವಾಸಿಗಳಿಗೆ ಒಳ್ಳೆಯ ಸುದ್ದಿ ದೊರಕಿದೆ.
ಮುಡಾ ವ್ಯಾಪ್ತಿಯಲ್ಲಿರುವ 200 ಬಡಾವಣೆಗಳನ್ನು ಮೊದಲ ಹಂತದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ.
ಮುಡಾದಲ್ಲಿ ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ, ಖಾತೆ ಸಿಗುತ್ತಿಲ್ಲ, ಜತೆಗೆ ಸಕಾಲದಲ್ಲಿ ಮೂಲ ಸೌಲಭ್ಯ ದೊರಕುತ್ತಿಲ್ಲ ಎಂದು ಕಂಗಾಲಾಗಿದ್ದ ಖಾಸಗಿ ಬಡಾವಣೆಗಳ ನಿವಾಸಿಗಳಿಗೆ ಸಿಹಿ ಸುದ್ದಿ.
ಮುಡಾ ತನ್ನ ವ್ಯಾಪ್ತಿಯಲ್ಲಿನ ಖಾಸಗಿ ಬಡಾವಣೆಗಳನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಿದ್ದು, ಇನ್ನು ಹತ್ತು ದಿನದೊಳಗೆ ಪೂರ್ಣಗೊಳ್ಳಲಿದೆ.
ಬಳಿಕ ಮುಡಾ ಬಡಾವಣೆ ನಿವಾಸಿಗಳು ತಮ್ಮ ವ್ಯಾಪ್ತಿಯಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಪಾವತಿಯೊಂದಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಸಹ ಪಡೆಯಬಹುದಾಗಿದೆ.
ಈಗ ಮೊದಲ ಹಂತವಾಗಿ ಮುಡಾ ವ್ಯಾಪ್ತಿಯಲ್ಲಿರುವ 200 ಬಡಾವಣೆಗಳು ಮೈಸೂರು ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಲಿವೆ.
ಇನ್ನು 10 ದಿನಗಳಲ್ಲಿ ಇಷ್ಟು ಬಡಾವಣೆಗಳ 15 ಸಾವಿರಕ್ಕೂ ಹೆಚ್ಚು ನಿವೇಶನಗಳು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸೇರಲಿವೆ.
ಮೊದಲ ಹಂತದಲ್ಲಿ ಹಸ್ತಾಂತರಕ್ಕೆ ಸಜ್ಜಾಗಿರುವ 200 ಬಡಾವಣೆಗಳಲ್ಲಿ ರಚನೆಯಾಗಿರುವ 15,085 ನಿವೇಶನಗಳು ಖಾತೆಯಾಗದೆ ಸಮಸ್ಯೆಯಾಗಿತ್ತು. ಇದರಿಂದ ನಿವೇಶನ ಖರೀದಿಗೆ ಗ್ರಾಹಕರು ಸಹ ಹಿಂದೇಟು ಹಾಕುತ್ತಿದ್ದರಿಂದ ಬಿಲ್ಡರ್‌ಗಳಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಖಾಸಗಿ ಬಡಾವಣೆಗಳ ನಿವೇಶನ ಮಾರಾಟಕ್ಕೂ ಸಹ ಹಿಡಿದಿದ್ದ ಗ್ರಹಣ ಬಿಟ್ಟಂತೆ ಆಗಿದೆ.
ಮೈಸೂರು ನಗರ ಹೊರವಲಯದ ಹೂಟಗಳ್ಳಿ ನಗರಸಭೆ ಸೇರಿದಂತೆ ರಮ್ಮನಹಳ್ಳಿ, ಕಡಕೊಳ, ಬೋಗಾದಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮತ್ತು 15 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 900 ಖಾಸಗಿ ಬಡಾವಣೆಗಳಿದ್ದು, ಅದರಲ್ಲಿ ಮೊದಲ ಹಂತದಲ್ಲಿ 200 ಬಡಾವಣೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ ಎನ್ನುತ್ತಾರೆ ಮುಡಾ ಅಧಿಕಾರಿಗಳು.
ಮೂಲ ಸೌಕರ್ಯಕ್ಕಾಗಿ ಜನಸಂಪರ್ಕ ಸಭೆಗಳಲ್ಲಿ ದೂರುಗಳನ್ನು ಸಲ್ಲಿಸುವ ನಿವಾಸಿಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತೆ ಆಗಿದೆ.
ಖಾತೆಯಾಗದೆ ತಮ್ಮ ಮಕ್ಕಳ ಮದುವೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದರೂ ಸಾಲ ಮಂಜೂರಾಗುತ್ತಿರಲಿಲ್ಲ. ಇದೀಗ ಮುಡಾದ ನಿರ್ಧಾರ ಬಹುತೇಕ ಜನರಲ್ಲಿ ಮಂದಹಾಸ ಮೂಡಿಸಿದೆ. ಇದರೊಂದಿಗೆ ಮೂಲ ಸೌಲಭ್ಯಕ್ಕೆ ನೇರವಾಗಿ ಸ್ಥಳೀಯ ಸಂಸ್ಥೆಯನ್ನು ಕೇಳಬಹುದು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
“ಮುಡಾ ವ್ಯಾಪ್ತಿಯ ಖಾಸಗಿ ಬಡಾವಣೆಗಳ ಹಸ್ತಾಂತರ ನಡೆಯುತ್ತಿದ್ದು, ಮೊದಲ ಹಂತದಲ್ಲಿ 200 ಬಡಾವಣೆಗಳ ಹಸ್ತಾಂತರ ಮಾಡಲಾಗುತ್ತಿದೆ. ಇನ್ನು 10 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ” ಎಂದು ಮುಡಾ ಆಯುಕ್ತ ರಘುನಂದನ್ ತಿಳಿಸಿದ್ದಾರೆ.