ಬೆಂಗಳೂರು: ಮನೆಯಲ್ಲಿ ಉತ್ಪತ್ತಿಯಾಗುವ ಕಸದಿಂದ ಮನೆಯಲ್ಲೇ ಗೊಬ್ಬರ ತಯಾರಿಸುವ ವಿಶೇಷ ಕಸದ ಬುಟ್ಟಿ
ಕಸವೆಂದು ಮೂಗು ಮುಚ್ಚಿಕೊಳ್ಳಬೇಡಿ. ಕಸದಿಂದ ರಸವೆಂಬಂತೆ ಸ್ವಚ್ಛತೆ ಕಾಪಾಡುವುದರ ಜೊತೆಗೆ ಕಸದಿಂದ ಉತ್ಪಾದಿಸಲಾಗುವ ಗೊಬ್ಬರ ಮಾರಾಟ ಮಾಡಿ ಹಣ ಗಳಿಸಬಹುದು.
ಇವೆಲ್ಲವೂ ಘನತ್ಯಾಜ್ಯ ವಿಂಗಡಣೆ ಸ್ಥಳದಲ್ಲೋ ಆಥವಾ ಬಯಲು ಪ್ರದೇಶದಲ್ಲಿ ಮಾಡಬಹುದೆಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು.
ನಿಮ್ಮ ಮನೆಯ ಕಸವನ್ನ ಸಂಗ್ರಹಿಸಿ ಮನೆಯಲ್ಲಿಯೇ ನಿಗದಿತ ದಿನಗಳ ಬಳಿಕ ಗೊಬ್ಬರ ಮಾಡಿ ಹಣ ಸಂಪಾದಿಸುವ ಯಂತ್ರವನ್ನು ದೋಸ್ತ್ ಬಿನ್ ಸೊಲ್ಯೂಷನ್ ಕಂಪನಿಯು ಆವಿಷ್ಕರಿಸಿದೆ.
ಯಲಹಂಕದ ಬಿಎಂಎಸ್ ಪ್ರೊಫೆಸರ್ ಹಾಗೂ ಡೀನ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯ ಸಂಸ್ಥಾಪಕಿ ಡಾ. ಸೀಮಾ ಸಿಂಗ್ ಅವರು ‘ದೋಸ್ತ್ ಬಿನ್’ ಯಂತ್ರವನ್ನು ಕಂಡುಹಿಡಿದಿದ್ದಾರೆ. ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಯಂತ್ರವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಕಸವನ್ನು ಹೊರಗೆ ಬಿಸಾಡುವ ಬದಲು ದೋಸ್ತ್ ಬಿನ್ ಯಂತ್ರದಲ್ಲಿ ಹಾಕಬಹುದಾಗಿದೆ. ಯಂತ್ರವು ಎರಡು ಹಂತದಲ್ಲಿ ಕಸ ಸಂಗ್ರಹಿಸಿ ಗೊಬ್ಬರ ಮಾಡಲಿದೆ. ಹಂತ ಹಂತವಾಗಿ ಕಸ ಹಾಕಿದರೆ 14 ಕೆ.ಜಿ ಕಸಕ್ಕೆ 8ರಿಂದ 10 ಕೆಜಿಯವರೆಗೂ ಗೊಬ್ಬರ ತಯಾರಿಸಬಹುದು.
ಅಲ್ಲದೆ 25 ಲೀಟರ್ ವರೆಗೂ ದ್ರವರೂಪದ ಗೊಬ್ಬರ ಉತ್ಪಾದಿಸಬಹುದಾಗಿದೆ. ದಿನನಿತ್ಯ ಕಸ ಹಾಕಿದ ಬಳಿಕ ಒಂದು ಹಿಡಿ ತೆಂಗಿನ ನಾರಿನ ಪುಡಿ, ಒಂದಷ್ಟು ನೀರು ಹಾಕಿದರೆ ಗೊಬ್ಬರವಾಗಿ ಮಾರ್ಪಾಡಾಗುತ್ತದೆ.
ಗಾಳಿ, ಬೆಳಕಿರುವ ಜಾಗದಲ್ಲಿ ಯಂತ್ರ ಇಟ್ಟರೆ ನಿರ್ದಿಷ್ಟ ಪ್ರಮಾಣದಲ್ಲಿ ಫಲಿತಾಂಶ ಬರಲಿದೆ.
ಬೇಸಿಕ್, ಪ್ರೀಮಿಯಂ ಮಾದರಿಯ ದೋಸ್ತ್ ಬಿನ್ ಯಂತ್ರಗಳನ್ನು ಆವಿಷ್ಕರಿಸಿದ್ದು, ಜನವರಿಯಿಂದ ಮಾರುಕಟ್ಟೆಗೆ ಬರಲಿದೆ. ಅಲ್ಲದೆ ದೋಸ್ತ್ ಬಿನ್ ಅಪ್ಲೀಕೇಷನ್ ಮೊಬೈಲ್ ಇನ್ಸ್ಟಾಲ್ ಮಾಡಿಕೊಂಡು ಮೊಬೈಲ್ನಲ್ಲಿಯೇ ಯಂತ್ರವನ್ನು ಆಪರೇಟ್ ಮಾಡಬಹುದಾಗಿದೆ.