ಚೆನ್ನೈ : ಮಠದ ಭಕ್ತೆಯಾಗಿದ್ದ ರಾಮನಗರ ಮೂಲದ ಹೇಮಾ ಎನ್ನುವ ಮಹಿಳೆಯನ್ನು, ಕುಂಭಕೋಣಂ ಮೂಲದ ಪೀಠಾಧಿಪತಿಯೊಬ್ಬರು ವರಿಸಿದ್ದು ಭಕ್ತರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ವರ್ಷಗಳ ಮತ್ತು ನೂರಾರು ಕೋಟಿ ಆಸ್ತಿಯನ್ನು ಹೊಂದಿರುವ ಮಠವನ್ನು, ಸ್ವಾಮೀಜಿ ಸಿಟ್ಟಿನಲ್ಲಿ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ.
ತಮಿಳುನಾಡಿನ ಪ್ರಸಿದ್ದ ಕುಂಭಕೋಣಂ ನಲ್ಲಿರುವ ಸೂರ್ಯನಾರ್ ದೇವಾಲಯದ ಪೀಠಾಧಿಪತಿಯೊಬ್ಬರು ತಮ್ಮ 54ನೇ ವಯಸ್ಸಿನಲ್ಲಿ ಸನ್ಯಾಸತ್ವ ತೊರೆದು, ಗೃಹಸ್ಥಾಶ್ರಮಕ್ಕೆ ಸೇರಿಕೊಂಡಿದ್ದಾರೆ. ಇದು, ಆಸ್ತಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕಾವೇರಿ ಕಣಿವೆ ಪ್ರದೇಶದಲ್ಲಿರುವ ಕುಂಭಕೋಣಂ ಸೂರ್ಯನಾರ್ ದೇವಾಲಯದ ಮಠದ ಮಹಾಲಿಂಗ ಸ್ವಾಮೀಜಿ, ಸನ್ಯಾಸತ್ವವನ್ನು ತೊರೆದಿದ್ದು 47 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.
ಶೈವ ಸಂಪ್ರದಾಯದ ಮಠ ಇದಾಗಿದ್ದು ಅಧೀನಂ (ಮಠದ ಪೀಠಾಧಿಪತಿ) ಅವರ ಸನ್ಯಾಸತ್ವ ತೊರೆಯುವ ನಿರ್ಧಾರಕ್ಕೆ ಬರುವ ಮೊದಲೇ, ಮಠದಿಂದ ಅವರನ್ನು ಹೊರಗೆ ಕಳುಹಿಸಲಾಗಿದೆ. ನವಗ್ರಹವನ್ನು ಆರಾಧಿಸುವ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದಾಗಿದೆ.
ನೂರಾರು ಕೋಟಿ ಬೆಲೆಬಾಳುವ ಆಸ್ತಿ ಈ ಮಠದ ಹೆಸರಿನಲ್ಲಿದ್ದು, ಆ ಕಾರಣಕ್ಕಾಗಿಯೇ ಹೇಮಾ ಎನ್ನುವ ಮಹಿಳೆ, ಸ್ವಾಮೀಜಿಯನ್ನು ಮದುವೆಯಾಗಿದ್ದಾರಾ ಎನ್ನುವ ಪ್ರಶ್ನೆ ಮಠದ ಭಕ್ತರಲ್ಲಿ ಕಾಡುತ್ತಿದೆ. ವಿಚಾರ ತಿಳಿದು ಬರುತ್ತಿದ್ದಂತೆಯೇ, ಗ್ರಾಮಸ್ಥರು ಮತ್ತು ಭಕ್ತರು, ಸ್ವಾಮೀಜಿಯನ್ನು ಮಠದಿಂದ ಹೊರಗೆ ಕಳುಹಿಸಿದ್ದಾರೆ.
ತಮ್ಮ ಮದುವೆಯನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ಶಿಷ್ಯ ಸ್ವಾಮಿನಾಥ ಸ್ವಾಮೀಜಿಯವರನ್ನು ಮಹಾಲಿಂಗ ಸ್ವಾಮೀಜಿ ವಜಾಗೊಳಿಸಿದ್ದಾರೆ. ಅಷ್ಟೇ ಅಲ್ಲದೇ, ಪ್ರತೀಕಾರವಾಗಿ ಮಠದ ಆಡಳಿತವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಂತೆ, ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಗೆ ಪತ್ರ ಬರೆದಿದ್ದಾರೆ.
“ನಾನು ಕಾನೂನಾತ್ಮಾಕವಾಗಿ ಮಠದ ಆಸ್ತಿಗಳು ತಮಿಳುನಾಡು ಸರ್ಕಾರದ ಪಾಲಾಗುವವರೆಗೆ ಮಠವನ್ನು ತೊರೆಯುವುದಿಲ್ಲ. ಇದಾದ ನಂತರ, ಕರ್ನಾಟಕಕ್ಕೆ ಹೋಗಿ ನೆಲೆಸುತ್ತೇನೆ” ಎಂದು ಮಹಾಲಿಂಗ ಸ್ವಾಮೀಜಿ ಹೇಳಿದ್ದಾರೆ. ಒಟ್ಟಿನಲ್ಲಿ, ಸ್ವಾಮೀಜಿಯ ಮದುವೆ ವಿಚಾರ, ನೂರಾರು ವರ್ಷಗಳ ಇತಿಹಾಸ, ನೂರಾರು ಕೋಟಿ ಆಸ್ತಿ ಇರುವ ಮಠ, ಸರ್ಕಾರದ ಪಾಲಾಗಿದೆ. ಇದು, ಭಕ್ತರ ಭಾರೀ ದುಃಖಕ್ಕೆ ಕಾರಣವಾಗಿದೆ.
ಮಠವನ್ನು ಈ ಕೂಡಲೇ ತೊರೆಯಬೇಕು ಎನ್ನುವ ಭಕ್ತರ ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಸೆಟೆದು, ಮಠದ ಆವರಣದಲ್ಲೇ ನಿಂತು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಬರುವವರೆಗೆ ಕಾದು, ಮಠವನ್ನು ಹಸ್ತಾಂತರಿಸುವ ಪತ್ರವನ್ನು ಇಲಾಖೆಯ ಅಧಿಕಾರಿಗಳಿಗೆ ನೀಡಿದರು.
ಸೂರ್ಯನಾರ್ ಮಠ, ನೂರಾರು ವರ್ಷಗಳ ಇತಿಹಾಸವಿರುವ ತಮಿಳುನಾಡಿನ 18 ಶೈವಮಠಗಳಲ್ಲೊಂದಾಗಿದ್ದು, ಮಹಾಲಿಂಗ ಸ್ವಾಮೀಜಿ ಮದುವೆಯಾದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಕೂಡಾ ಪೀಠಾಧಿಪತಿಗಳು ಮದುವೆಯಾದ ಉದಾಹರಣೆಗಳಿದ್ದು, ಮದುವೆ ಎನ್ನುವುದು ನನ್ನ ವೈಯಕ್ತಿಕ ನಿರ್ಧಾರ ಎಂದು ಭಕ್ತರಿಗೆ ತಿರುಗೇಟು ನೀಡಿದ್ದಾರೆ.