ಬೆಳಗಾವಿ/ಬೆಂಗಳೂರು: ಬೆಳಗಾವಿಯಿಂದ ದಾನಿಯೊಬ್ಬರು ನೀಡಿದ ಯಕೃತ್ ಅನ್ನು ರಸ್ತೆ ಮೂಲಕ ಹುಬ್ಬಳ್ಳಿವರೆಗೆ ತೆರಳಿ, ಅಲ್ಲಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ರವಾನಿಸಲಾಯಿತು.
ಅಂಗಾಂಗ ಕಸಿಯಲ್ಲಿ ʼಸ್ಪರ್ಷ್ʼಉತ್ಕೃಷ್ಟತೆಯ ಮತ್ತೊಂದು ಮೈಲಿಗಲ್ಲು: ಬೆಳಗಾವಿಯಿಂದ ಬೆಂಗಳೂರಿಗೆ ಯಕೃತ್ ತಡೆ ರಹಿತ ರವಾನೆ: ಸಾವಿನಲ್ಲೂ ಶ್ರೇಷ್ಠತೆ ಸಾರಿದ 16 ವರ್ಷದ ಬಾಲಕ
ಬೆಂಗಳೂರಿನ ಯಶವಂತಪುರದಲ್ಲಿರುವ ಸ್ಪರ್ಶ ಆಸ್ಪತ್ರೆಯಲ್ಲಿ ಲಿವರ್ ಕಸಿ ಅಗತ್ಯವಿದ್ದ ರೋಗಿಯೊಬ್ಬರಿಗೆ ಬೆಳಗಾವಿ ದಾನಿ ನೀಡಿದ ಯಕೃತ್ ಅನ್ನು ಜೋಡಣೆ ಮಾಡಲಾಯಿತು. ಬೆಳಗಾವಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದವರೆಗೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಿಂದ ಯಶವಂತಪುರ ಸ್ಪರ್ಶ ಆಸ್ಪತ್ರೆವರೆಗೆ ಜೀರೋ ಟ್ರಾಫಿಕ್ ಮೂಲಕ ಸಾಗಿಸಲಾಯಿತು.
ಅಂಗಾಂಗ ಕಸಿಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಸ್ಪರ್ಷ್ ಆಸ್ಪತ್ರೆ ಸಮೂಹ ಮತ್ತೊಂದು ಸಾಧನೆ ಬರೆದಿದೆ. 63 ವರ್ಷದ ರೋಗಿಯೊಬ್ಬರಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದ 16 ವರ್ಷದ ಬಾಲಕನ ಯಕೃತ್ ಕಸಿ ಮಾಡಿ ಜೀವದಾನ ನೀಡಿದೆ.
ಬುಧವಾರ ಬೆಳಗಾವಿಯಿಂದ ತಡೆ ರಹಿತ ಸಂಚಾರದ ಮೂಲಕ ಕೇವಲ 3 ಗಂಟೆಯಲ್ಲಿ ಬೆಂಗಳೂರಿನ ಯಶವಂತಪುರದ ಸ್ಪರ್ಷ್ ಆಸ್ಪತ್ರೆ ತಲುಪಿತು. ಈ ಸಮಯದಲ್ಲಿ ಬಾಲಕನ ಯಕೃತ್ ಸನ್ನದ್ಧವಾಗಿ ನಿಂತಿದ್ದ ಪರಿಣಿತ ಕಸಿ ತಜ್ಞ ವೈದ್ಯರ ತಂಡದಿಂದ ರೋಗಿಯ ದೇಹಕ್ಕೆ ಯಕೃತ್ತನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಕಳೆದೊಂದು ವರ್ಷದಿಂದ ಯಕೃತ್ತಿಗಾಗಿ ಕಾಯಲಾಗುತ್ತಿತ್ತು.
ಬೆಂಗಳೂರು ಸ್ಪರ್ಷ್ ಆಸ್ಪತ್ರೆಯ ವೈದ್ಯಕೀಯ ತಂಡ, ಕರ್ನಾಟಕ ರಾಜ್ಯ ಅಂಗಾಂಗ ಮತ್ತು ಜೀವಕೋಶ ಕಸಿ ಪ್ರಾಧಿಕಾರ ʼಜೀವನ ಸಾರ್ಥಕತೆʼ ಮತ್ತು ಇಂಡಿಗೋ ಏರ್‌ಲೈನ್ಸ್‌ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸರು, ಸಂಚಾರಿ ಪೊಲೀಸರ ನೆರವಿನೊಂದಿಗೆ ಗ್ರೀನ್ ಕಾರಿಡಾರ್ (ಝೀರೋ ಟ್ರಾಫಿಕ್ ) ಮೂಲಕ ಯಕೃತ್‌ನ್ನು ಯಾವುದೇ ಅಡೆತಡೆಯಿಲ್ಲದೇ ಶರವೇಗದಂತೆ ಬೆಂಗಳೂರಿಗೆ ತಂದು ತಕ್ಷಣವೇ ಕಸಿ ಮಾಡಿ ಜೀವವೊಂದನ್ನು ಉಳಿಸಿದೆ.
ಮಂಗಳವಾರ ರಾತ್ರಿ ನಿಧನ ಹೊಂದಿದ್ದ 16 ವರ್ಷದ ಬೆಳಗಾವಿಯ ಬಾಲಕನ ಕುಟುಂಬ ಯಕೃತ್ ದಾನ ಮಾಡುವ ಅತ್ಯಂತ ಶ್ರೇಷ್ಠ ನಿರ್ಧಾರವನ್ನು ಕೈಗೊಂಡಿತ್ತು. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಬಾಲಕನ ದೇಹದಿಂದ ಯಕೃತ್‌ನ್ನು ಬೇರ್ಪಡಿಸಿ ತಕ್ಷಣ ಝೀರೋ ಟ್ರಾಫಿಕ್ ಮೂಲಕ ಒಂದು ಗಂಟೆಯೊಳಗೆ ಹುಬ್ಬಳ್ಳಿಗೆ ತಲುಪಿಸಲಾಯಿತು. ಅಲ್ಲಿ ಸಿದ್ಧವಾಗಿ ನಿಂತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನ ಮೂಲಕ ಪ್ರಯಾಣಿಕರ ಆಸನದಲ್ಲೇ ಬಾಲಕನ ಯಕೃತ್‌ನ ಶೀತಲೀಕೃತ ಬಾಕ್ಸ್ ಇರಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬೆ.9.35ಕ್ಕೆ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆ ಧಾವಿಸಿ ಬಂದ ಆಂಬುಲೆನ್ಸ್ ಮತ್ತು ವೈದ್ಯಕೀಯ ತಂಡ ಯಕೃತ್‌ನ್ನು ಯಶವಂತಪುರದ ಸ್ಪರ್ಶ್ ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ತಲುಪಿಸಿತು.
ಸಂಕೀರ್ಣ ಪರಿಸ್ಥಿತಿಗಳಲ್ಲಿ ತಂಡದ ವ್ಯವಸ್ಥಿತ ಸಹಕಾರದ ಮಹತ್ವದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಸ್ಪರ್ಶ್ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್, “ಈ ಸಾಧನೆಯು ಪರಿಣಾಮಾತ್ಮಕವಾದ ಪ್ರಯತ್ನದ ಫಲಶೃತಿಯನ್ನು ಎತ್ತಿ ತೋರಿಸುತ್ತದೆ. ನಿಧನ ಹೊಂದಿದ ಬಾಲಕನ ಕುಟುಂಬದ ಸರ್ವೋತ್ಕೃಷ್ಟ ನಿರ್ಧಾರದಿಂದ ಒಂದು ಜೀವ ಉಳಿದಿದೆ. ಅಂಗಾಂಗ ಕಸಿ ಪ್ರಾಧಿಕಾರ, ಪೊಲೀಸ್ ಇಲಾಖೆ, ಇಂಡಿಗೋ ಏರ್‌ಲೈನ್ಸ್ ಸೇರಿದಂತೆ ಪ್ರತಿಯೊಬ್ಬರ ಸಮನ್ವಯ ಸಹಕಾರದಿಂದ ಇದು ಸಾಧ್ಯವಾಗಿದೆ. ಯಕೃತ್ ಕಸಿಯಲ್ಲಿ ಸ್ಪರ್ಷ್ ಆಸ್ಪತ್ರೆ ಸಮೂಹ ಮಂಚೂಣಿಯಲ್ಲಿರುವುದಕ್ಕೆ, ತಮ್ಮ ಮರುಜೀವ ಮತ್ತು ಮರುಜೀವನದ ನಿರೀಕ್ಷೆಯಲ್ಲಿರುವ ರೋಗಿಗಳಿಗೆ ಆಶಾಕಿರಣವಾಗಿರುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ” ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now