ಬೆಂಗಳೂರು: ಕರ್ನಾಟಕಕ್ಕೆ ನೀಡುವ ಸಾಲದ ಮಿತಿಯನ್ನು ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಹಣಕಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ನಬಾರ್ಡ್ ಬ್ಯಾಂಕ್ನಿಂದ ನೀಡುವ ಸಾಲದ ಮಿತಿಯನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಮುಂದೆಯೇ ಎಲ್ಲ ರಾಜ್ಯಗಳ ಸಾಲದ ಮೊತ್ತವನ್ನು ಕಡಿತ ಮಾಡಲಾಗಿದೆ. ಅದರಂತೆ ಕರ್ನಾಟಕದ್ದು ಕಡಿತ ಮಾಡಲಾಗಿದೆ. ಹೀಗಾಗಿ ನಿಮಗಾಗಿ ಪ್ರತ್ಯೇಕ ನೀತಿ ರೂಪಿಸಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಬಾರ್ಡ್ ಮೂಲಕ ಕರ್ನಾಟಕ ರಾಜ್ಯದ ಸಹಕಾರಿ ಸಂಸ್ಥೆಗಳಿಗೆ ಸಾಲ ನೀಡಲಾಗುತ್ತಿತ್ತು. ಆದರೆ ಈ ವರ್ಷ ಶೇಕಡಾ 58 ರಷ್ಟು ಸಾಲದ ಪ್ರಮಾಣ ಕಡಿತ ಮಾಡಲಾಗಿದೆ.
ಇದರಿಂದ ರಾಜ್ಯದ ಡಿಸಿಸಿ ಬ್ಯಾಂಕ್, ಪಿಎಸಿಎಸ್ ಮೂಲಕ ರೈತರಿಗೆ ಅಲ್ಪಾವಧಿ ಸಾಲ ನೀಡಿಕೆ ಕಡಿತವಾಗಿದೆ.
2024-25ರಲ್ಲಿ ರಾಜ್ಯದಲ್ಲಿ 35 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂಪಾಯಿ ಸಾಲ ವಿತರಣೆ ಮಾಡುವ ಗುರಿ ಇತ್ತು. ಆದರೆ ನಬಾರ್ಡ್ ಬ್ಯಾಂಕ್ನಿಂದ ಈ ವರ್ಷ 2,340 ಕೋಟಿ ರೂಪಾಯಿ ಮಾತ್ರ ನೀಡಿದ್ದರಿಂದ ಸಮಸ್ಯೆ ಆಗಿದೆ.
ಕಳೆದ ವರ್ಷ ನಬಾರ್ಡ್ನಿಂದ ₹5,600 ಕೋಟಿ ಕೊಟ್ಟಿದ್ದರು, ಈ ವರ್ಷ ಕೇವಲ ₹2,340 ಕೋಟಿಗೆ ಇಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯಕ್ಕೆ ಕೊಡುವ ಆರ್ಥಿಕ ನೆರವು ಶೇ.58 ರಷ್ಟು ಕಡಿಮೆ ಆಗಿದೆ.
ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರನ್ನು ಭೇಟಿಯಾಗಿ ನಬಾರ್ಡ್ನಿಂದ ರಾಜ್ಯದ ರೈತರಿಗೆ ಆಗಿರುವ ಸಾಲದ ಕೊರತೆಯನ್ನು ಸರಿಪಡಿಸಿ, ಆಗಿರುವ ಅನ್ಯಾಯವನ್ನು ಸರಿದೂಗಿಸುವಂತೆ ಮನವಿ ಮಾಡಿದ್ದರು.
ಇದೇ ವೇಳೆ ಸಿಎಂ ಜೊತೆ ಸಚಿವರಾದ ಬೈರತಿ ಸುರೇಶ್, ಚಲುವರಾಯಸ್ವಾಮಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಜರಿದ್ದರು.