ಚಂಡೀಗಢ/ನವದೆಹಲಿ: ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನಾ ಮದ್ದು ವಿರೋಧಿ ಸಂಸ್ಥೆ (ನಾಡಾ) ನಾಲ್ಕು ವರ್ಷಗಳ ಕಾಲ ಕುಸ್ತಿ ಮೈದಾನದಿಂದ ನಿಷೇಧಿಸಿದೆ. ಹರಿಯಾಣದ ಸೋನಿಪತ್‌ನಲ್ಲಿ ಡೋಪಿಂಗ್ ಪರೀಕ್ಷೆಗೆ ಮೂತ್ರದ ಮಾದರಿ ಸಲ್ಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಶಿಕ್ಷೆಗೆ ಗುರಿಪಡಿಸಲಾಗಿದೆ.
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಪೂನಿಯಾ ಪಾಲ್ಗೊಳ್ಳುವಂತಿಲ್ಲ. ಜೊತೆಗೆ, ತರಬೇತಿ ಪಡೆಯದಂತೆಯೂ ಕ್ರಮ ಕೈಗೊಳ್ಳಲಾಗಿದೆ.
ಬಜರಂಗ್ ಪೂನಿಯಾ ಅವರನ್ನು ನಾಲ್ಕು ವರ್ಷಗಳ ಅವಧಿಗೆ ಅನರ್ಹರೆಂದು ಘೋಷಿಸಲಾಗಿದ್ದು, ಈ ನಿಷೇಧದಿಂದಾಗಿ ಅವರು ಮತ್ತೆ ಕುಸ್ತಿಗೆ ಮರಳಲು ಸಾಧ್ಯವಿಲ್ಲ. ತರಬೇತಿ ಹಾಗೂ ವಿದೇಶದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಕೂಡಾ ಸಾಧ್ಯವಾಗದು. ಅವರ ಮೇಲಿನ ನಿಷೇಧ ಏಪ್ರಿಲ್ 23, 2024ರಿಂದ ಜಾರಿಗೆ ಬರಲಿದೆ ಎಂದು ನಾಡಾ ತಿಳಿಸಿದೆ.
ರಾಷ್ಟ್ರೀಯ ತಂಡದ ಆಯ್ಕೆ ಹಿನ್ನೆಲೆಯಲ್ಲಿ ಡೋಪ್ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಲು ನಾಡಾ ತಂಡ ಬಜರಂಗ್ ಅವರ ಬಳಿ ಬಂದಿತ್ತು. ಈ ವೇಳೆ ಅವರು ಡೋಪ್ ಪರೀಕ್ಷೆಗೆ ನಿರಾಕರಿಸಿದ್ದರಿಂದ ಹಾಗೂ ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ನಾಡಾ, ನಿಷೇಧ ಹೇರುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ.
ನಾಡಾ ಇತ್ತೀಚೆಗೆ ಬಜರಂಗ್ ಪುನಿಯಾ ಅವರ ಡೋಪ್ ಪರೀಕ್ಷೆಗೆ ಬಂದಿತ್ತು. ಈ ವೇಳೆ ನಾಡಾದ ಕಾರ್ಯಶೈಲಿಯ ಬಗ್ಗೆ ಕೆಲವು ಪ್ರಶ್ನೆಗಳನ್ನೆತ್ತುವುದರ ಜೊತೆಗೆ, ಪರೀಕ್ಷೆಗೆ ತಂದಿದ್ದ ಕಿಟ್‌ನ ಅವಧಿ ಮುಗಿದಿದೆ ಎಂದು ಆರೋಪಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಇಡೀ ಘಟನೆಯ ವಿವರ ನೀಡಿದ್ದರು.
“ನಾನು ಮಾದರಿ ನೀಡಲು ಯಾವತ್ತೂ ನಿರಾಕರಿಸಲಿಲ್ಲ. ಆದರೆ, ತಮ್ಮ ಮಾದರಿಗಳಿಗೆ ಕಳುಹಿಸಲಾದ ಅವಧಿ ಮೀರಿದ ಪರೀಕ್ಷಾ ಕಿಟ್ಗಳ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೆ. ಅಲ್ಲದೇ, ಈ ಬಗ್ಗೆ ನಾಡಾದಿಂದ ಸ್ಪಷ್ಟೀಕರಣ ಕೂಡ ಕೋರಿದ್ದೆ.
ನಾನು ಕೇಳಿದ್ದ ಪ್ರಶ್ನೆಗಳಿಗೆ ನಾಡಾ ಬಳಿ ಉತ್ತರವಿಲ್ಲ. ನಾಡಾ ಮಾಡಿದ ತಪ್ಪುಗಳಿಗೆ ಹೊಣೆಗಾರರಾಗಲು ಸಿದ್ಧರಿಲ್ಲ” ಎಂದು ಬಜರಂಗ್ ಪೂನಿಯಾ ವಿಡಿಯೋದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು.