ಕೂಡ್ಲಿಗಿ: ಕುಟುಂಬದ ವಾರ್ಷಿಕ ಆದಾಯ ಹೆಚ್ಚಳ, ತೆರಿಗೆ ಪಾವತಿದಾರರೆಂಬ ಕಾರಣದಿಂದ ಕೂಡ್ಲಿಗಿ ತಾಲೂಕು ಸೇರಿ ಜಿಲ್ಲಾದ್ಯಂತ ಅಮಾನತು ಆಗಿದ್ದ 10,357 ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ಗಳನ್ನು ಆಹಾರ ಸರಬರಾಜು ಇಲಾಖೆ ಸಕ್ರಿಯಗೊಳಿಸಿದೆ.
ಅಕ್ರಮ ಬಿಪಿಎಲ್ ಕಾರ್ಡ್‌ಗಳ ವಿರುದ್ಧ ಸಮರ ಸಾರಿರುವ ಆಹಾರ ಇಲಾಖೆ, ಈಗ ದಾಖಲೆಗಳ ಪರಿಶೀಲನೆ ಬಳಿಕ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಮತ್ತೆ ಸಕ್ರಿಯಗೊಳಿಸುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಅಮಾನತು ಮಾಡಲಾಗಿದ್ದ 10,357 ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ಗಳನ್ನು ಸಕ್ರಿಯಗೊಳಿಸಿದೆ.
ಬಿಪಿಎಲ್, ಅಂತ್ಯೋದಯ ಪಡಿತರ ಕಾರ್ಡ್‌ಗಳು ಅಮಾನತು ಆಗಿದ್ದರಿಂದ ಅರ್ಹ ಫಲಾನುಭವಿಗಳಿಗೆ ಸರಕಾರದ ನಾನಾ ಯೋಜನೆಗಳು ಕೈತಪ್ಪಿದ್ದರ ಜತೆಗೆ ಬಡವರು ಆಸ್ಪತ್ರೆಗೆ ತೆರಳುವುದು ಸೇರಿ ನಾನಾ ತೊಂದರೆ ಅನುಭವಿಸುವಂತಾಗಿತ್ತು. ರಾಜ್ಯ ಸರಕಾರದ ದಿಢೀರ್ ಕ್ರಮದಿಂದ ಜನಾಕ್ರೋಶ ವ್ಯಕ್ತವಾಗಿತ್ತು.
ಅಲ್ಲದೆ, ಪಡಿತರ ಕಾರ್ಡ್ ಅಮಾನತು ಆಗಿದ್ದ ಕುಟುಂಬಗಳ ವೃದ್ಧರು, ಮಹಿಳೆಯರು, ಅಬಲೆಯರು ತಾಲೂಕಿನ ಆಹಾರ ಇಲಾಖೆಯ ಕಚೇರಿಗೆ ಅಲೆದಾಟದಿಂದ ಹೈರಾಣಾಗಿದ್ದರ ಜತೆಗೆ ಕೂಲಿ ಮಾಡಿದ ಹಣ ಖರ್ಚು ಮಾಡುವಂಥ ಸಂಕಷ್ಟಕ್ಕೂ ಸಿಲುಕಿದ್ದರು.
ರಾಜ್ಯ ಸರಕಾರದಿಂದ ಪಡಿತರ ಕಾರ್ಡ್ ಅಮಾನತು ಕ್ರಮ ಖಂಡಿಸಿ ಪ್ರತಿಪಕ್ಷಗಳು, ಸಂಘ, ಸಂಸ್ಥೆಯವರ ಹೋರಾಟ ನಡೆಸಿದ್ದರೆ, ಸ್ವಪಕ್ಷದ ಶಾಸಕರು, ಮುಖ್ಯಮಂತ್ರಿ ಮತ್ತು ಆಹಾರ ಇಲಾಖೆ ಸಚಿವರಿಗೆ ಮನವರಿಕೆ ಮಾಡಿದ್ದರು. ಇದರಿಂದ ಎಚ್ಚೆತ್ತ ಸರಕಾರ ರಾಜ್ಯದಲ್ಲಿ ಯಾವೊಬ್ಬ ಅರ್ಹರಿಗೂ ಅನ್ಯಾಯವಾಗಬಾರದೆಂಬ ಕಾರಣ ನೀಡುವ ಮೂಲಕ ಅಮಾನತು ಆಗಿರುವ ಬಿಪಿಎಲ್, ಅಂತ್ಯೋದಯ ಕಾರ್ಡ್‌ಗಳನ್ನು ಸಕ್ರಿಯಗೊಳಿಸುವಂತೆ ಆದೇಶ ಹೊರಡಿಸಿತ್ತು.
ಹೀಗಾಗಿ, ವಿಜಯನಗರ ಜಿಲ್ಲಾಧಿಕಾರಿಗಳ ಸೂಚನೆ ಅನುಸಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರು ಜಿಲ್ಲೆಯ 10,357 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ ಕಾರ್ಯವನ್ನು ಮುಗಿಸಿದ್ದಾರೆ. ಇದಲ್ಲದೆ, 6 ತಿಂಗಳಿಂದ ಪಡಿತರ ಪಡೆಯದೇ ಇರುವುದರಿಂದ ಅಮಾನತು ಇಡಲಾಗಿದ್ದ 5,148 ಪಡಿತರ ಚೀಟಿಗಳನ್ನೂ ಸಕ್ರಿಯಗೊಳಿಸಲಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಮಾನತು ಆಗಿರುವ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಕಾರ್ಡ್‌ಗಳನ್ನು ಸಕ್ರಿಯಗೊಳಿಸಲು ಕಳೆದ 4-5 ದಿನಗಳಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ರಿಯಾಜ್ ಸೇರಿ ಅಧಿಕಾರಿಗಳು, ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ.
ಪ್ರತಿದಿನ 2 ಸಾವಿರಕ್ಕೂ ಹೆಚ್ಚಿನ ಕಾರ್ಡ್‌ಗಳಿಗೆ ಉಪನಿರ್ದೇಶಕರು ತಮ್ಮ ಹೆಬ್ಬೆಟ್ಟು ಗುರುತು ನೀಡುವ ಮೂಲಕ ಅಮಾನತು ಕಾರ್ಡ್‌ಗಳನ್ನು ಸಕ್ರಿಯಗೊಳಿಸುವುದಕ್ಕಾಗಿ ಹಗಲು, ರಾತ್ರಿಯೆನ್ನದೇ ಶ್ರಮಿಸಿದ್ದಾರೆ.
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಮೀರಿದೆ ಎಂದು ಕೂಡ್ಲಿಗಿ ತಾಲೂಕಿನ 1,518, ಕೊಟ್ಟೂರು 1,467, ಹೊಸಪೇಟೆ 1,572, ಹೂವಿನಹಡಗಲಿ 932, ಹಗರಿಬೊಮ್ಮನಹಳ್ಳಿ 962 ಹಾಗೂ ಹರಪನಹಳ್ಳಿ 2,875 ಸೇರಿ ಒಟ್ಟು 9,326 ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್‌ಗಳು ಅಮಾನತು ಆಗಿದ್ದವು.
ಅದರಂತೆ, ಜಿಲ್ಲೆಯಲ್ಲಿತೆರಿಗೆ ಪಾವತಿದಾರರ 1,031 ಹಾಗೂ ಸರಕಾರಿ ನೌಕರರ 101 ಬಿಪಿಎಲ್ ಪಡಿತರ ಕಾರ್ಡ್‌ಗಳು ಅಮಾನತು ಆಗಿದ್ದವು. ಇದೀಗ, ಸರಕಾರಿ ನೌಕರರ 101 ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಆಗಿ ಪರಿವರ್ತನೆಗೊಳ್ಳಲಿದ್ದು, ಇನ್ನುಳಿದ 10,357 ಕಾರ್ಡ್‌ಗಳು ಅಮಾನತು ಆಗಿದ್ದನ್ನು ಇಲಾಖೆ ಅಧಿಕಾರಿಗಲು ತೆರವುಗೊಳಿಸಿ ಸಕ್ರಿಯಗೊಳಿಸಿದ್ದಾರೆ.
ತೀರಾ ಹಿಂದುಳಿದ ತಾಲೂಕಾದ ಕೂಡ್ಲಿಗಿಯಲ್ಲಿ ಬಡವರೇ ಹೆಚ್ಚಿದ್ದರೂ, ಅಂಥ ಸಾಕಷ್ಟು ಬಡ ಕುಟುಂಬಗಳಿಗೆ ಅನ್ನಭಾಗ್ಯಕ್ಕೆ ಆಸರೆಯಾಗಿದ್ದ 1,518 ಬಿಪಿಎಲ್, ಅಂತ್ಯೋದಯ ಪಡಿತರ ಕಾರ್ಡ್‌ಗಳು ಅಮಾನತು ಆಗಿದ್ದವು.
ಹೀಗಾಗಿ, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸುವ ಮೂಲಕ ಅರ್ಹರ ಕಾರ್ಡ್‌ಗಳನ್ನು ಸಕ್ರಿಯಗೊಳಿಸುವಂತೆ ಮನವಿ ಮಾಡಿದ್ದರು. ಅಲ್ಲದೆ, ಇಲಾಖೆ ಕಾರ್ಯದರ್ಶಿ, ಸಚಿವರ ಆಪ್ತ ಕಾರ್ಯದರ್ಶಿಯವರ ಬಳಿಗೆ ಓಡಾಡಿ ಅಮಾನತು ಆಗಿರುವ ಪಡಿತರ ಕಾರ್ಡ್‌ಗಳು ಸಕ್ರಿಯಗೊಳ್ಳಲು ಸಾಕಷ್ಟು ಶ್ರಮಿಸಿದ್ದನ್ನು ಸ್ಮರಿಸಬಹುದಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಅಮಾನತು ಆಗಿದ್ದ ಒಟ್ಟು 10,357 ಬಿಪಿಎಲ್, ಅಂತ್ಯೋದಯ ಪಡಿತರ ಕಾರ್ಡ್‌ಗಳನ್ನು ಸರಕಾರದ ಆದೇಶದ ನಿಯಮಾನುಸಾರ ಸಕ್ರಿಯಗೊಳಿಸಲಾಗಿದೆ. ಸರಕಾರಿ ನೌಕರರ 101 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರಾದ ರಿಯಾಜ್ ಅವರು ತಿಳಿಸಿದ್ದಾರೆ.