ಬೆಂಗಳೂರು: ಬೆಂಗಳೂರಿನಲ್ಲಿ ಅನಧಿಕೃತ ಒಳಚರಂಡಿ ಸಂಪರ್ಕಗಳ ವಿರುದ್ಧ ಜಲಮಂಡಳಿ ಪತ್ತೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಈಗಾಗಲೇ ಅದು 5645 ಅನಧಿಕೃತ ಸಂಪರ್ಕಗಳನ್ನು ಪತ್ತೆ ಮಾಡಿದೆ. ದಂಡ ವಸೂಲಿ ಹಾಗೂ ಸೇವಾ ಶುಲ್ಕ ಸಂಗ್ರಹ ಮೂಲಕ 100 ಕೋಟಿ ರೂ.ಸಂಗ್ರಹಿಸಲಾಗಿದೆ.
ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿ 10.70 ಲಕ್ಷ ಸಂಪರ್ಕಗಳಿಗೆ ಸ್ಯಾನಿಟರಿ (ಒಳಚರಂಡಿ) ಸೇವೆ ಒದಗಿಸುತ್ತಿರುವ ಬೆಂಗಳೂರು ಜಲಮಂಡಳಿಗೆ ಒಳಚರಂಡಿ ವ್ಯವಸ್ಥೆಯ ಮೇಲೆ ಉಂಟಾಗುತ್ತಿರುವ ಒತ್ತಡದಿಂದಾಗಿ ತ್ಯಾಜ್ಯ ನೀರು ನಿರ್ವಹಣೆಯೇ ದೊಡ್ಡ ಸವಾಲಾಗಿದೆ.
ಅಕ್ರಮ ಸಂಪರ್ಕ ಮತ್ತು ಮಳೆ ನೀರನ್ನು ಒಳಚರಂಡಿಗೇ ಬಿಡುತ್ತಿರುವ ಕಾರಣ ಒಳಚರಂಡಿ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗಿದೆ. ಪರಿಣಾಮ, ನಗರದ ನಾನಾ ಕಡೆ ಮ್ಯಾನ್‌ಹೋಲ್‌ಗಳಲ್ಲಿ ತ್ಯಾಜ್ಯ ನೀರು ಉಕ್ಕಿ ರಸ್ತೆಗೆ ಹರಿಯುತ್ತಿದೆ. ಸಾರ್ವಜನಿಕರು, ವಾಹನ ಸವಾರರು ಓಡಾಡಲು ಸಂಕಟಪಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಮಂಡಳಿಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಅನಧಿಕೃತ ಒಳಚರಂಡಿ ಸಂಪರ್ಕಗಳ ಪತ್ತೆ ಕಾರ್ಯಾಚರಣೆ ನಡೆಸುತ್ತಿರುವ ಜಲಮಂಡಳಿ, ಮೊದಲ ಹಂತದಲ್ಲಿ 5645 ಅನಧಿಕೃತ ಸಂಪರ್ಕಗಳನ್ನು ಪತ್ತೆ ಮಾಡಿದೆ.
10.70 ಲಕ್ಷ ಸ್ಯಾನಿಟರಿ ಸೇವಾ ಸಂಪರ್ಕಗಳನ್ನು ಹೊಂದಿರುವ ಜಲಮಂಡಳಿ, ಕಳೆದ ಕೆಲವು ತಿಂಗಳಲ್ಲಿ 40,903 ಸಂಪರ್ಕಗಳನ್ನು ಸರ್ವೆ ಮಾಡಿದೆ. ಈ ವೇಳೆ ನಗರದ ವಿವಿಧ ವಿಭಾಗಗಳಲ್ಲಿ 5645 ಅನಧಿಕೃತ ಸಂಪರ್ಕಗಳು ಕಂಡು ಬಂದಿವೆ. ಈ ಪೈಕಿ 1635 ಸಂಪರ್ಕಗಳನ್ನು ಮಾಲೀಕರಿಂದ ಅರ್ಜಿ ಪಡೆದು, ದಂಡ ಮತ್ತು ಸೇವಾ ಶುಲ್ಕವನ್ನೂ ವಸೂಲಿ ಮಾಡಿ ಸಕ್ರಮಗೊಳಿಸಲಾಗಿದೆ.
ಉಳಿದ 4010 ಸಂಪರ್ಕಗಳಿಂದ ದಂಡ ವಸೂಲು ಮಾಡಲಾಗಿದ್ದು, ಸೇವೆಯನ್ನು ಶೀಘ್ರ ಸಕ್ರಮಗೊಳಿಸಬೇಕು ಎಂದು ತಿಳಿವಳಿಕೆ ನೋಟಿಸ್ ನೀಡಿ ಎಚ್ಚರಿಸಲಾಗಿದೆ ಎಂದು ಜಲಮಂಡಳಿಯ ಮೂಲಗಳು ತಿಳಿಸಿವೆ.
ಹಲವು ವರ್ಷಗಳಿಂದಲೂ ಅನಧಿಕೃತ ಸ್ಯಾನಿಟರಿ ಸಂಪರ್ಕಗಳಿವೆ. ಆದರೆ, ಆರಂಭದಲ್ಲಿಯೇ ಗುರುತಿಸಿ ಕಡಿವಾಣ ಹಾಕದಿರುವ ಪರಿಣಾಮ ಅವುಗಳ ಸಂಖ್ಯೆ ಹೆಚ್ಚಿದೆ. ಜಲಮಂಡಳಿ ಅವುಗಳನ್ನು ಗುರುತಿಸಿ ದಂಡ ಹಾಕುವ ಜತೆಗೆ, ಸ್ಯಾನಿಟರಿ ಸಂಪರ್ಕ ಸೇವೆಗೆ ಇರುವ ನಿಗದಿತ ಶುಲ್ಕ ಪಡೆದು ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸುತ್ತಿದೆ. ಈ ಮೂಲಕ ಸುಮಾರು 100 ಕೋಟಿ ರೂ. ಸಂಗ್ರಹಿಸಿದೆ.
ಈ ಹಣವನ್ನು ತ್ಯಾಜ್ಯ ನೀರು ನಿರ್ವಹಣೆಗೆ ಬಳಕೆ ಮಾಡುತ್ತಿದೆ. ಸಕ್ರಮಗೊಂಡ ಸಂಪರ್ಕಗಳಿಗೆ ಅನುಗುಣವಾಗಿ ಆಯಾ ವ್ಯಾಪ್ತಿಯಲ್ಲಿ ಒಳಚರಂಡಿ ಮತ್ತು ಮ್ಯಾನ್‌ಹೋಲ್‌ಗಳ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ.
ಕಾವೇರಿ ನೀರಿನ ಸಂಪರ್ಕ ಪಡೆಯುವವರಿಗೆ ಅದರ ಜತೆಗೆ ನಿಗದಿತ ಶುಲ್ಕ ಪಾವತಿಸಿಕೊಂಡು ಒಳಚರಂಡಿ ಸಂಪರ್ಕವನ್ನೂ ಮಂಡಳಿ ನೀಡಲಿದೆ. ಆದರೆ, ಕಾವೇರಿ ನೀರಿನ ಸಂಪರ್ಕ ಪಡೆಯದವರು ಸ್ವಯಂಪ್ರೇರಿತವಾಗಿ ಮಂಡಳಿಗೆ ಅರ್ಜಿ ಸಲ್ಲಿಸಿ ಒಳಚರಂಡಿ ಸೇವಾ ಸಂಪರ್ಕ ಪಡೆಯಬೇಕು.
ಸಂಪರ್ಕಗಳ ಸಂಖ್ಯೆಗೆ ಅನುಗುಣವಾಗಿ ಕೊಳವೆ ಮಾರ್ಗ, ಮ್ಯಾನ್‌ಹೋಲ್ ನಿರ್ಮಾಣ ಮಾಡಲಿದೆ. ಇದರ ಆಧಾರದಲ್ಲಿಯೇ, ಎಸ್‌ಟಿಪಿಯನ್ನೂ ನಿರ್ಮಿಸಿ ತ್ಯಾಜ್ಯ ನೀರು ಸಂಸ್ಕರಣೆ ನಿರ್ವಹಣೆ ಮಾಡಲಿದೆ. ಅನಧಿಕೃತ ಸಂಪರ್ಕಗಳು ಹೆಚ್ಚಾದರೆ, ಒಳಚರಂಡಿ ವ್ಯವಸ್ಥೆ ಮೇಲೆ ಒತ್ತಡ ಉಂಟಾಗಿ ತ್ಯಾಜ್ಯ ನೀರು ರಸ್ತೆಗೆ ಬರಲಿದೆ. ನಿರ್ವಹಣೆಗೂ ತೊಡಕಾಗಲಿದೆ.
ಜಲಮಂಡಳಿಯ 16 ವಿಭಾಗಗಳ ಪೈಕಿ ಉತ್ತರ-1ರ ವಿಭಾಗದಲ್ಲಿಯೇ ಹೆಚ್ಚಿನ ಅನಧಿಕೃತ ಸಂಪರ್ಕಗಳು ಕಂಡು ಬಂದಿವೆ. ಸರ್ವೆ ಮಾಡಿರುವ 40,903 ಸಂಪರ್ಕಗಳ ಪೈಕಿ, ಉತ್ತರ-1ರ ವಿಭಾಗದಲ್ಲಿ 2184 ಸಂಪರ್ಕ ಪರಿಶೀಲಿಸಲಾಗಿದ್ದು, ಈ ಪೈಕಿ 1621 ಅಕ್ರಮ ಸಂಪರ್ಕಗಳಾಗಿವೆ. 198 ಸಕ್ರಮಗೊಂಡಿದ್ದು, 1423 ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಸಾರ್ವಜನಿಕರು ಜಲಮಂಡಳಿಯ ಕಾರ್ಯಚಟುವಟಿಕೆಗೆ ಸಹಕರಿಸಬೇಕು. ತ್ಯಾಜ್ಯ ನೀರನ್ನು ಅನಧಿಕೃತವಾಗಿ ಒಳಚರಂಡಿಗೆ ಬಿಡಬಾರದು. ಅನಧಿಕೃತ ಸಂಪರ್ಕಗಳನ್ನು ಅರ್ಜಿ ಸಲ್ಲಿಸುವ ಮೂಲಕ ಸ್ವಯಂಪ್ರೇರಿತವಾಗಿ ಸಕ್ರಮಗೊಳಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ಅನಧಿಕೃತ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ಮುಂದುವರಿಯಲಿದೆ.
-ಡಾ.ರಾಮ್ ಪ್ರಸಾದ್ ಮನೋಹರ್, ಅಧ್ಯಕ್ಷ, ಜಲಮಂಡಳಿ