ಅಮರಾವತಿ: ದೇಶಾದ್ಯಂತ ವಕ್ಫ್ ಬೋರ್ಡ್ (Waqf Board) ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (N.Chandrababu Naidu) ನೇತೃತ್ವದ ಸರ್ಕಾರ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಿ ಆದೇಶ ಹೊರಡಿಸಿದೆ.
ಈ ಹಿಂದಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರ್ಕಾರವು 11 ಸದಸ್ಯರ ವಕ್ಫ್ ಮಂಡಳಿಯನ್ನು ರಚಿಸಿತ್ತು. ಈ ಮಧ್ಯೆ ಹಿಂದಿನ ಸರ್ಕಾರ ಹೊರಡಿಸಿದ್ದ ಜಿಒ ಅನ್ನು ಸಮ್ಮಿಶ್ರ ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಎನ್.ಎಂ.ಫಾರೂಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಕ್ಫ್ ಮಂಡಳಿ ಸದಸ್ಯರ ನಾಮನಿರ್ದೇಶನವನ್ನು ಪ್ರಶ್ನಿಸಿ ಕೆಲವು ವ್ಯಕ್ತಿಗಳು ಹೈಕೋರ್ಟ್ ಅನ್ನು ಸಂಪರ್ಕಿಸಿದ ನಂತರ, ಅಧ್ಯಕ್ಷರ ಚುನಾವಣೆಗೆ ತಡೆ ನೀಡಲು ಹೈಕೋರ್ಟ್ ಮಧ್ಯಂತರ ಆದೇಶಗಳನ್ನು ಹೊರಡಿಸಿದೆ ಎಂದು ಅವರು ಹೇಳಿದ್ದಾರೆ.
ಆ ಪೈಕಿ ಮೂವರು ಚುನಾಯಿತ ಸದಸ್ಯರಾಗಿದ್ದರೆ, ಉಳಿದವರು ನಾಮನಿರ್ದೇಶನ ಸದಸ್ಯರು. ವಕ್ಫ್ ಮಂಡಳಿಯನ್ನು ರಚಿಸಲು ಅನುಸರಿಸಿದ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ 2023ರ ನ. 1ರಂದು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು.
ʼʼಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಹೊರಡಿಸಿದ್ದ ಅಲ್ಪ ಸಂಖ್ಯಾತರ ಕಲ್ಯಾಣ ವಕ್ಫ್ ಮಂಡಳಿಯ ಜಿವಿಇ-47 ಅನ್ನು ರದ್ದುಗೊಳಿಸಿ ಪ್ರಸ್ತುತ ಸಮ್ಮಿಶ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದ್ದ ಜಿವಿಒ ರದ್ದುಗೊಳಿಸಿ ಜಿವಿಒ-75 ಹೊರಡಿಸಿರುವುದನ್ನು ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಅ. 21ರಂದು, ವಕ್ಫ್ ರಚನೆಗೆ ಆಗಿನ ಸರ್ಕರವು ನಾಮ ನಿರ್ದೇಶನ ಮಾಡಿದ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸುಪ್ರೀಂ ಕೋರ್ಟ್ಗೆ ಕೆಲವರು ಅರ್ಜಿ ಸಲ್ಲಿಸಿದ ನಂತರ ವಕ್ಫ್ ಮಂಡಳಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತುʼʼ ಎಂದು ಎನ್.ಎಂ.ಫಾರೂಕ್ ತಿಳಿಸಿದ್ದಾರೆ.
ಸದ್ಯ ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ವಕ್ಫ್ ಕಾಯ್ದೆಯನ್ನು ಮೊದಲು 1954ರಲ್ಲಿ ಸಂಸತ್ತು ಅಂಗೀಕರಿಸಿತು. ಅದರ ನಂತರ 1995ರಲ್ಲಿ ತಿದ್ದುಪಡಿ ಮಾಡಲಾಯಿತು. ಬಳಿಕ 2013ರಲ್ಲಿ ಮತ್ತೊಮ್ಮೆ ಮಾಡಿದ ತಿದ್ದುಪಡಿಯು ವಕ್ಫ್ ಮಂಡಳಿಯ ಹಕ್ಕುಗಳನ್ನು ಮತ್ತಷ್ಟು ಬಲಪಡಿಸಿತು. ಕಾಯ್ದೆಯ ಪ್ರಕಾರ ವಕ್ಫ್ ಮಂಡಳಿಯು ಯಾರೊಬ್ಬರ ಆಸ್ತಿಯನ್ನು ತನ್ನದೇ ಎಂದು ಘೋಷಿಸಬಹುದು ಮತ್ತು ಅದರ ನಿರ್ಧಾರವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವುದಿಲ್ಲ.
ವಕ್ಫ್ ಆಸ್ತಿಗಳು ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ವಹಣೆಗಾಗಿ ಮಾಡಿದ ಕಾನೂನೇ ವಕ್ಫ್ ಕಾಯ್ದೆ. ಇದರ ಪ್ರಕಾರ ಮುಸ್ಲಿಂ ಕಾನೂನಿನಿಂದ ಪವಿತ್ರ, ಧಾರ್ಮಿಕ ಅಥವಾ ದತ್ತಿ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಅಥವಾ ಸಂಸ್ಥೆಯಿಂದ ಆಸ್ತಿಯ ಶಾಶ್ವತ ಸಮರ್ಪಣೆಯಾಗಿದೆ.