ತಿರುಪತಿ (ಆಂಧ್ರಪ್ರದೇಶ): ತಿರುಮಲದಲ್ಲಿ ಟಿಟಿಡಿಯ ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ದೇವಾಲಯದ ಪವಿತ್ರತೆಗಾಗಿ ಹಲವಾರು ಬದಲಾವಣೆ ತಂದಿದ್ದು, ಈಗ ರಾಜಕೀಯ ನಾಯಕರಿಗೆ ಖಡಕ್ ಸೂಚನೆಯೊಂದನ್ನು ನೀಡಿದೆ.
ತಿರುಮಲದಲ್ಲಿ ರಾಜಕೀಯ ಮತ್ತು ದ್ವೇಷದ ಭಾಷಣಗಳನ್ನು ಟಿಟಿಡಿ ನಿಷೇಧಿಸಿದ್ದು, ಪವಿತ್ರ ಸ್ಥಳದ ಪವಿತ್ರತೆ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ಕಾಪಾಡಲು ಸೂಚಿಸಿದೆ. ಜತೆಗೆ ಸ್ಥಳೀಯರಿಗೆ ವಿಶೇಷ ದರ್ಶನದಲ್ಲಿ ಬದಲಾವಣೆಯನ್ನು ಘೋಷಿಸಿದೆ.
ತಿರುಮಲದಲ್ಲಿ ನಡೆದ ಇತ್ತೀಚಿನ ಘಟನೆಗಳ ಪರಿಣಾಮ ರಾಜಕೀಯ ಅಥವಾ ದ್ವೇಷದ ಭಾಷಣಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ಮಂಡಳಿ ಹೇಳಿದೆ.
“ರಾಜಕೀಯದ ಕೆಲ ಮುಖಂಡರು ದರ್ಶನದ ನಂತರ ದೇವಸ್ಥಾನದ ಆವರಣದ ಬಳಿ ಮಾಧ್ಯಮಗಳ ಮುಂದೆ ರಾಜಕೀಯ ಹಾಗೂ ಉದ್ರೇಕಕಾರಿ ಹೇಳಿಕೆಗಳನ್ನು ನೀಡಿ ಆಧ್ಯಾತ್ಮಿಕ ಶಾಂತಿಗೆ ಭಂಗ ತರುತ್ತಿದ್ದಾರೆ. ಟಿಟಿಡಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಈ ನಿರ್ಧಾರವನ್ನು ಗೌರವಿಸುವಂತೆ ಒತ್ತಾಯಿಸಿದೆ. ಮತ್ತು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಅಲ್ಲದೇ, ‘ತಿರುಮಲದ ದೈವಿಕ ಮತ್ತು ಪ್ರಶಾಂತ ಪರಿಸರ ಸಂರಕ್ಷಿಸುವ ತನ್ನ(ಟಿಟಿಡಿ) ಬದ್ಧತೆಯನ್ನು ಮಂಡಳಿಯು ಒತ್ತಿಹೇಳುತ್ತದೆ” ಎಂದು ಟಿಟಿಡಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ತಿರುಪತಿ ನಿವಾಸಿಗಳ ವಿಶೇಷ ದರ್ಶನ ಟೋಕನ್‌ಗಳಲ್ಲಿ ಬದಲಾವಣೆಯನ್ನು ಟಿಟಿಡಿ ಪ್ರಕಟಿಸಿದೆ. ತಿರುಪತಿ ನಗರ, ತಿರುಪತಿ ಗ್ರಾಮಾಂತರ, ರೇಣಿಗುಂಟಾ, ಚಂದ್ರಗಿರಿ ಮಂಡಲಗಳ ಸ್ಥಳೀಯರು ಹಾಗೂ ತಿರುಮಲದ ಸ್ಥಳೀಯರು ತಮ್ಮ ಮೂಲ ಆಧಾರ್ ಕಾರ್ಡ್ ತೋರಿಸಿ ಆಯಾ ಕೇಂದ್ರಗಳಲ್ಲಿ ಸ್ಥಾಪಿಸಲಾದ ಕೌಂಟರ್‌ಗಳಲ್ಲಿ ಈ ಟೋಕನ್‌ಗಳನ್ನು ಪಡೆಯಲು ಅನುಮತಿಸಲಾಗಿದೆ. ಟಿಟಿಡಿ ಕೈಗೊಂಡಿರುವ ನಿರ್ಧಾರದ ಭಾಗವಾಗಿ ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸ್ಥಳೀಯರಿಗೆ ದರ್ಶನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಎಕ್ಸ್‌ನಲ್ಲಿ ಪ್ರತ್ಯೇಕ ಪೋಸ್ಟ್‌ನಲ್ಲಿ “ಹವಾಮಾನದ ಕಾರಣ, ಡಿಸೆಂಬರ್ 3 ರಂದು ಸ್ಥಳೀಯರ ಶ್ರೀವಾರಿ ದರ್ಶನಕ್ಕಾಗಿ ಟೋಕನ್‌ಗಳನ್ನು ಡಿಸೆಂಬರ್ 2 ರಂದು ಬೆಳಗ್ಗೆ 5 ಗಂಟೆಗೆ ಮಹತಿ ಆಡಿಟೋರಿಯಂ (ತಿರುಪತಿ) ಮತ್ತು ಸಮುದಾಯ ಭವನದಲ್ಲಿ (ತಿರುಮಲ) ನೀಡಲಾಗುವುದು ಎಂದು ಟಿಟಿಡಿ ತಿಳಿಸಿತ್ತು. ಈ ಮೊದಲು ಡಿಸೆಂಬರ್ 1 ರಂದು ಟೋಕನ್ ನೀಡಬೇಕಿತ್ತು.
ಕಳೆದ ತಿಂಗಳ ಕೊನೆಯಲ್ಲಿ ಹೊಸ ಆಡಳಿತ ಮಂಡಳಿ ರಚನೆಯಾದ ನಂತರ ಭಕ್ತರ ಅನುಕೂಲಕ್ಕಾಗಿ ಟಿಟಿಡಿ ತೆಗೆದುಕೊಂಡ ಹಲವಾರು ನಿರ್ಧಾರಗಳಲ್ಲಿ ಇವು ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.