ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿಯಲ್ಲಿರುವ ಮೃತ್ಯುಂಜಯ ವಿದ್ಯಾಪೀಠಕ್ಕೆ ಇದೀಗ 106 ವರ್ಷಗಳ ಸಂಭ್ರಮ. 1918 ರಲ್ಲಿ ದುರ್ಗದ ಶಾಲೆಯಲ್ಲಿ 20 ವಿದ್ಯಾರ್ಥಿಗಳಿಂದ ಆರಂಭವಾದ ಈ ವಿದ್ಯಾಪೀಠಸದಲ್ಲಿ ಈಗ ಕನಿಷ್ಠ ಮೂರುಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಇದುವರೆಗೊ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. 1918ರಲ್ಲಿ ಬಡಮಕ್ಕಳಿಗಾಗಿ ಆರಂಭವಾದ ಈ ಶಾಲೆಯಲ್ಲಿ ಈಗಲೂ ಸಹ ಯಾವುದೇ ಡೊನೇಶನ್ ಇಲ್ಲದೇ ಕೇವಲ ಶಾಲೆಯ ಶುಲ್ಕದೊಂದಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಅಂದು ವಾರನ್ನಕ್ಕಾಗಿ ಬಡ ವಿದ್ಯಾರ್ಥಿಗಳು ಬೇರೆ ಬೇರೆ ಮನೆಗೆ ಊಟಕ್ಕಾಗಿ ಹೋಗುವ ಅನಿವಾರ್ಯತೆ ಇತ್ತು.
ಹಂಸಭಾವಿ ಗ್ರಾಮದ ಜನರು ವಿದ್ಯಾಪೀಠದ ಕನಸು ಕಾಣುತ್ತಿರುವ ದಿನಗಳಲ್ಲಿ ಪಕ್ಕದ ಗ್ರಾಮ ಬೋಗಾವಿಗೆ ಧಾರವಾಡ ಮುರುಘಾಮಠದ ಮೃತ್ಯುಂಜಯ ಶ್ರೀಗಳು ಆಗಮಿಸುತ್ತಾರೆ. ಗ್ರಾಮಸ್ಥರೆಲ್ಲಾ ಸೇರಿ ಹಂಸಭಾವಿಯಲ್ಲಿ ವಿದ್ಯಾಪೀಠ ಆರಂಭಿಸುವಂತೆ ಮನವಿ ಮಾಡಿದಾಗ ಚಿಗುರೊಡೆದಿದ್ದು ಈ ವಿದ್ಯಾಪೀಠ.
1918 ದುರ್ಗದ ಪ್ರೌಢಶಾಲೆ, 1961 ರಲ್ಲಿ ಎನ್.ಎಂ.ಡಿ. ಬಾಲಕಿಯರ ಪ್ರೌಢಶಾಲೆ, 1967 ಮಹಾಂತಸ್ವಾಮಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, 1982 ಗ್ರಾಮೀಣ ಬಹುತಾಂತ್ರೀಕ ವಿದ್ಯಾಲಯ, 1993 ಮೃತ್ಯುಂಜಯ ಕನ್ನಡ ಕಿರಿಯ ಪ್ರಾಥಮಿಕ ಶಾಲೆ, 2001 ಮಹಾಂತಸ್ವಾಮಿ ಪದವಿಪೂರ್ವ ಮಹಾವಿದ್ಯಾಲಯ, 2013 ಶಿವಯೋಗಿಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಡಿಪ್ಲೋಮಾ, ಆರ್ಟ್ಸ್ ಸೈನ್ಸ್ ಕಾಲೇಜ್, ಹೈಸ್ಕೂಲ್, ಪ್ರೈಮರಿ ಸ್ಕೂಲ್, ಇಂಗ್ಲೀಷ್ ಮಿಡಿಯಮ್ ಸ್ಕೂಲ್ ಸ್ಥಾಪನೆಯಾಗಿವೆ.
1923ರಿಂದ ವಿದ್ಯಾಪೀಠದಲ್ಲಿ ದಾಸೋಹ ಮನೆಯಿದ್ದು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹ ನೀಡಲಾಗುತ್ತಿದೆ. 1918 ರಲ್ಲಿ ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ಕಾಲ ಆ ಕಾಲದಲ್ಲಿ ಆರಂಭವಾಗಿದ್ದು ಈ ವಿದ್ಯಾಪೀಠ. ಹಿರಿಯ ಜೀವಗಳು ತಮ್ಮ ಮುಂದಿನ ಪೀಳಿಗಿಗೆ ಶಿಕ್ಷಣದ ಕೊರತೆಯಾಗಬಾರದು ಎಂದು ಸ್ಥಾಪಿಸಿದ ಸಂಸ್ಥೆ ವಿದ್ಯಾಪೀಠ.
ದುರ್ಗದ ಚೆನ್ನಬಸಪ್ಪ 30 ಸಾವಿರ ರೂಪಾಯಿ ನೀಡಿದ್ದರಿಂದ ಈ ಶಾಲೆಗೆ ಈಗಲೂ ದುರ್ಗದ ಶಾಲೆ ಎಂದು ಹೆಸರಿಟ್ಟುಕೊಂಡು ಬರಲಾಗಿದೆ. ವಾರದ ಮನೆ ಮತ್ತು ಕಂತಿಭೀಕ್ಷೆ ಮೂಲಕ ಆರಂಭವಾದ ಶಾಲೆ ನಂತರ ವಸತಿ ನಿಲಯ ಮತ್ತು ಪ್ರಸಾದ ನಿಲಯ ಸ್ಥಾಪಿಸಲ್ಪಟ್ಟು ವಿದ್ಯಾರ್ಥಿಗಳು ಇಲ್ಲಿ ವಾಸ ಮಾಡುವಂತಾಯಿತು. 20 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆ ಇದೀಗ 20 ಎಕರೆ ವಿಸ್ತೀರ್ಣದಲ್ಲಿ 20ಕ್ಕೂ ಅಧಿಕ ಕಟ್ಟಡಗಳನ್ನು ಹೊಂದಿದ್ದು ಹಲವು ಕೋರ್ಸಗಳ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ.
ಇದೇ 9ರಂದು ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ ಇದ್ದು ಇಲ್ಲಿ ವ್ಯಾಸಂಗ ಮಾಡಿರುವ ಎಲ್ಲ ವಿದ್ಯಾರ್ಥಿಗಳು ಬರುವಂತೆ ಇಲ್ಲಿಯ ಶಿಕ್ಷಕ ವೃಂದ ಆಹ್ವಾನಿಸಿದೆ. ಬಂದು ಈ ವಿದ್ಯಾಪೀಠ ನೂರುವರ್ಷವಲ್ಲಾ ಶತಶತಮಾನಗಳಷ್ಟು ಬೆಳೆಯಲಿ. ಕೋಟ್ಯಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿ ಎಂದು ಹಾರೈಸುವಂತೆ ಇಲ್ಲಿಯ ಸಿಬ್ಬಂದಿ ಮನವಿ ಮಾಡಿದ್ದಾರೆ.
ಪ್ರಸ್ತುತ ವಿದ್ಯಾಪೀಠದಲ್ಲಿ ಉಪನ್ಯಾಸಕರಾಗಿರುವ ಕಿರಣಕುಮಾರ್, “ಇಲ್ಲಿ ವಿಶೇಷವಾದ ಶಕ್ತಿಯಿದ್ದು ಕಾಣದ ಕೈಗಳು ಸದಾಕಾಲ ನಮಗೆ ಆಶೀರ್ವಾದಿಸುತ್ತದೆ ಎಂಬ ಅನುಭವವಾಗುತ್ತದೆ. ಈ ವಿದ್ಯಾಪೀಠ ತಮಗೆ ವಿಶಿಷ್ಟವಾದ ಸಂಸ್ಕಾರ ನೀಡಿದ್ದು ಇಲ್ಲಿಯ ಅನ್ನ, ಆಸರೆ, ಅಕ್ಷರದ ಪ್ರಭಾವದಿಂದ ತಮ್ಮ ದುಡಿಮೆಯಲ್ಲಿನ ಹಣದಲ್ಲಿ ಕೆಲವೊಂದಿಷ್ಟನ್ನು ಬೇರೆಯವರ ಶಿಕ್ಷಣಕ್ಕೆ ಕಷ್ಟಕ್ಕೆ ಸ್ಪಂದಿಸುವ ಶಿಕ್ಷಣವನ್ನು ವಿದ್ಯಾಪೀಠ ಕಲಿಸಿದೆ” ಎಂದರು.
ಕೆಲವರು ನಿವೃತ್ತಿನಂತರ ಸಹ ಇದೇ ಸಂಸ್ಥೆಯಲ್ಲಿ ತಮ್ಮ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಸರ್ಕಾರಿ ನೌಕರಿಂದ ನಿವೃತ್ತರಾದ ನಂತರ ಈ ವಿದ್ಯಾಪೀಠಕ್ಕೆ ಬಂದು ತಮ್ಮ ಕೈಲಾದ ಸೇವೆಯನ್ನು ಮಾಡುವ ಹಳೆಯ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇದೀಗ 106 ವರ್ಷಗಳ ನಂತರ ಈ ಮೃತ್ಯುಂಜಯ ವಿದ್ಯಾಪೀಠ ಶತಮಾನೋತ್ಸವದ ಸಂಭ್ರಮ ಆಚರಿಸುತ್ತಿದೆ. ವಿದ್ಯಾಪೀಠದ ಆವರಣದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಇದೇ 9 ರಂದು ನಡೆಯುವ ವಿದ್ಯಾಪೀಠದ ಶತಮಾನೋತ್ಸವಕ್ಕೆ ದೇಶ ವಿದೇಶಗಳಲ್ಲಿರುವ ಮಾಜಿ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ತಾವು ಶಿಕ್ಷಣ ಪಡೆದ ದಿನಗಳನ್ನ ತಮ್ಮ ಸ್ನೇಹಿತರ ಜೊತೆ ಮೆಲುಕುಹಾಕಲಿದ್ದಾರೆ.
ರಾಜ್ಯದಲ್ಲಿಯೇ ಎರಡು ರಾಷ್ಟ್ರಪ್ರಶಸ್ತಿ ಪಡೆದ ಹೆಗ್ಗಳಿಕೆ ಈ ವಿದ್ಯಾಪೀಠಕ್ಕೆ ಇದೆ. ಬಾಲಕಿಯರಿಗಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಖಾಸಗಿ ಶಿಕ್ಷಣ ಸಂಸ್ಥೆಯೊಂದು ವಸತಿ ನಿಲಯ ಆರಂಭಿಸಿದ ಕೀರ್ತಿಗೆ ಸಹ ಈ ಸಂಸ್ಥೆ ಭಾಜನವಾಗಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೇ ಈ ವಿದ್ಯಾಪೀಠದಲ್ಲಿ ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now