ನಿನ್ನೆ ರಾತ್ರಿ ಬೆಂಗಳೂರಿನ ಕೆಆರ್ ಸರ್ಕಲ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕ-ಯುವತಿ ಸಾವನ್ನಪ್ಪಿದ್ದಾರೆ. ಪ್ರಶಾಂತ್ (25), ಶಿಲ್ಪ (25) ಮೃತ ದುರ್ದೈವಿಗಳು.
ರಾತ್ರಿ ರಾತ್ರಿ 9 ಗಂಟೆ ಊಟ ಮುಗಿಸಿಕೊಂಡು ಬೈಕ್ನಲ್ಲಿ ಹೋಗ್ತಿದ್ದಾಗ ಬಿಬಿಎಂಪಿಯ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಿಬ್ಬರು ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐಟಿಪಿಎಲ್ ಟಿಸಿಎಸ್ನಲ್ಲಿ ಕೆಲಸ ಮಾಡ್ತಿದ್ದರು. ಇನ್ನು, ಪ್ರಶಾಂತ್ ಮೂಲತಃ ಬೆಂಗಳೂರಿನ ಬಾಣಸವಾಡಿ ನಿವಾಸಿ ಎಂದು ತಿಳಿದುಬಂದಿದೆ. ಈತನ ಸ್ನೇಹಿತೆ ಶಿಲ್ಪಾ ಆಂಧ್ರ ಪ್ರದೇಶದವಳು. ಉದ್ಯೋಗ ಅರಿಸಿ ಬೆಂಗಳೂರಿಗೆ ಬಂದಿದ್ದ ಶಿಲ್ಪಾ ಪಿಜಿ ಒಂದರಲ್ಲಿ ವಾಸವಿದ್ದಳು.
ನಿನ್ನೆ ಭಾನುವಾರ ರಜೆ ಹಿನ್ನೆಲೆಯಲ್ಲಿ ಸಂಜೆ ಸ್ನೇಹಿತನ ಜೊತೆ ಊಟಕ್ಕೆ ಎಂದು ಹೋಗಿದ್ದಳು. ರಾತ್ರಿಯ ಊಟ ಮುಗಿಸಿ ಮೆಜೆಸ್ಟಿಕ್ನಿಂದ ಕೆ.ಆರ್.ಸರ್ಕಲ್ ಮಾರ್ಗವಾಗಿ ಬೈಕ್ನಲ್ಲಿ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್.ಸರ್ಕಲ್ ಕಡೆ ವೇಗವಾಗಿ ಬಂದ ಕಸದ ಲಾರಿ, ಬೈಕ್ಗೆ ಗುದ್ದಿದೆ. ಅಪಘಾತದ ರಭಸಕ್ಕೆ 10 ಮೀಟರ್ ನಷ್ಟು ದೂರ ಮೃತರ ದೇಹಗಳು ಹೋಗಿ ಬಿದ್ದಿವೆ.
ಪರಿಣಾಮ ರಸ್ತೆ ಮೇಲೆ ರಕ್ತ ಚೆಲ್ಲಿದೆ. ಕೂಡಲೇ ಅಪಘಾತಕ್ಕೊಳಗಾದವರನ್ನ ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆದಿತ್ತು, ಆದರೆ ಮಾರ್ಗದಲ್ಲಿಯೇ ಸಾವನ್ನಪ್ಪಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.