ಮಧ್ಯಪ್ರಾಚ್ಯ ಆಂತರಿಕ ಸಂಘರ್ಷಕ್ಕೆ ನಲುಗುತ್ತಿದೆ. ಸಿರಿಯಾದಲ್ಲಿ ಸಂಘರ್ಷ ಭುಗಿಲೆದ್ದಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಸಿರಿಯಾ ಸರ್ಕಾರ ಹಾಗೂ ಬಂಡುಕೋರರ ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧಕ್ಕೆ ಡೆಡ್ಲಿ ತಿರುವು ಸಿಕ್ಕಿದ್ದು, ಭಾರೀ ಹಿಂಸಾಚಾರ ನಡೆಯುತ್ತಿದೆ. ತೀವ್ರ ಪ್ರಮಾಣಕ್ಕೆ ತಿರುಗಿರುವ ಆಂತರಿಕ ಸಂಘರ್ಷದಿಂದ ಸಿರಿಯಾದಲ್ಲಿನ ಜನರು ಅತಂತ್ರರಾಗಿದ್ದಾರೆ. ಸಿರಿಯಾದಲ್ಲಿ ಕಳೆದ 13 ವರ್ಷಗಳಿಂದ ಅಂತರ್ಯುದ್ಧ ನಡೆಯುತ್ತಿದ್ದು, ಕಳೆದ ಕೆಲದಿನಗಳಿಂದ ಈ ಯುದ್ಧ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಹಮಾ, ಅಲೆಪ್ಪೊ ನಗರದ ಬಳಿಕ ದಾರಾ ನಗರವನ್ನೂ ಬಂಡುಕೋರರು ವಶಪಡಿಸಿಕೊಂಡಿದ್ದಾರೆ. ಇದು ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರ ಭಾರೀ ಹೊಡೆತ ನೀಡಿದಂತಾಗಿದೆ.
ಮಧ್ಯಪ್ರಾಚ್ಯ ಭೂಮಿಗೂ ರಕ್ತದಾಹಕ್ಕೂ ಅವಿನಾಭಾವ ಸಂಬಂಧ ಎನ್ನುವಂತಾಗಿದೆ. ಮೇಲಿಂದ ಮೇಲೆ ಯುದ್ಧಗಳು ನಡೆಯುತ್ತಿದ್ದು ನೆತ್ತರು ಹರಿಯುತ್ತಿದೆ. ಇಸ್ರೇಲ್ ಹಾಗೂ ಹಮಾಸ್ ಯುದ್ಧ ಮುಗಿಯಿತು ಅನ್ನುವಾಗಲೇ ಮತ್ತೊಂದು ದೇಶದಲ್ಲಿ ಯುದ್ಧ ಶುರುವಾಗಿದೆ. ಅದು ಕೂಡ ಆಂತರಿಕ ಯುದ್ಧ..
ಮಧ್ಯಪ್ರಾಚ್ಯ.. ಒಂದಿಲ್ಲೊಂದು ಯುದ್ಧಗಳಿಂದ ಯಾವಾಗಲೂ ನಲುಗುತ್ತಲೇ ಇರುತ್ತದೆ. ಅದರಲ್ಲೂ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆ ಕಾಲು ಕೆರೆದುಕೊಂಡು ಸಮರಕ್ಕೆ ಹೋಗುತ್ತವೆ. ಇತ್ತೀಚೆಗಷ್ಟೇ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಕದನ ವಿರಾಮ ಬಿದ್ದಿದೆ. ಆದ್ರೆ ಈಗ ಎರಡು ದೇಶಗಳ ಮಧ್ಯೆ ಯುದ್ಧವಲ್ಲ ಬದಲಾಗಿ ಆಂತರಿಕ ಯುದ್ಧಕ್ಕೆ ನಾಂದಿ ಹಾಡಲಾಗಿದೆ.
ಸಿರಿಯಾ ಸದ್ಯ ಆಂತರಿಕ ಸಂಘರ್ಷದಿಂದ ನಲುಗುತ್ತಿದೆ. ರಷ್ಯಾ ಹಾಗೂ ಇರಾನ್ ಬೆಂಬಲಿತ ಅಧ್ಯಕ್ಷ ಬಶರ್ ಅಲ್ ಅಸಾದ್ ವಿರುದ್ಧ ಸಿರಿಯಾದ ಬಂಡುಕೋರ ಪಡೆಗಳು ಸಂಘರ್ಷಕ್ಕೆ ಇಳಿದಿವೆ. ಇದರ ನೇತೃತ್ವವನ್ನು ಹಯಾತ್ ತಹ್ರೀರ್ ಅಲ್ ಶಾಮ್ ಸಂಘಟನೆ ವಹಿಸಿದ್ದು, ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸಾದ್ಗೆ ಸೆಡ್ಡು ಹೊಡೆದಿವೆ. ಇದರಿಂದ ಸಿರಿಯಾದಲ್ಲಿ ಭಾರೀ ಹಿಂಸಾಚಾರ ನಡೆಯುತ್ತಿದ್ದು, ಸಾವಿರಾರು ಜನ ಪಲಾಯನಗೈಯುತ್ತಿದ್ದಾರೆ. ಇದರ ನಡುವೆ ಹಿಜ್ಬುಲ್ಲಾ ಕೂಡ ಸಿರಿಯಾದ ಸರ್ಕಾರಕ್ಕೆ ಬೆಂಬಲ ನೀಡಿರುವುದು ಹಿಂಸಾಚಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ರಷ್ಯಾ ಮತ್ತು ಇರಾನ್ ಕೂಡ ಸಿರಿಯಾ ಸರ್ಕಾರದ ಬೆಂಬಲಕ್ಕೆ ನಿಂತಿದ್ದು, ಯಾವುದೇ ಕ್ಷಣದಲ್ಲಾದರೂ ದೊಡ್ಡ ಯುದ್ಧ ನಡೆಯುವ ನಿರೀಕ್ಷೆ ಇದೆ.
ಕೇವಲ ಭಾರತ ಮಾತ್ರವಲ್ಲದೇ ರಷ್ಯಾ ಸೇರಿ ಅನೇಕ ರಾಷ್ಟ್ರಗಳು ಸಿರಿಯಾವನ್ನು ತೊರೆಯುವಂತೆ ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಸಿರಿಯಾದ ಅಸಾದ್ ಸರ್ಕಾರಕ್ಕೆ ರಷ್ಯಾ ಹಾಗೂ ಇರಾನ್ ಬೆಂಬಲ ಇದೆ. ಈಗ ಹಿಜ್ಬುಲ್ಲಾ ಕೂಡ ತನ್ನ ಬೆಂಬಲ ಘೋಷಿಸಿದೆ. ಇದರ ನಡುವೆಯೇ ಬಂಡುಕೋರ ಪಡೆಗಳು ಸಿರಿಯಾದ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿವೆ. ಅಲೆಪ್ಪೋ ನಗರವನ್ನು ಈ ಮುಂಚೆಯೇ ಬಂಡುಕೋರ ಪಡೆಗಳು ವಶಪಡಿಸಿಕೊಂಡಿದ್ದವು. ಈಗ ಹಮಾ ಹಾಗೂ ಧಾರಾ ನಗರಗಳನ್ನು ವಶಪಡಿಸಿಕೊಂಡಿವೆ. ಇದರೊಂದಿಗೆ ಸಿರಿಯಾದಲ್ಲಿನ ಬಶರ್ ಅಲ್ ಅಸಾದ್ ಸರ್ಕಾರ ಡೋಲಾಯಮಾನವಾಗಿದೆ.
ಇನ್ನು ಆಂತರಿಕ ಯುದ್ಧ ಬೆನ್ನಲ್ಲೇ ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಅದರಲ್ಲೂ ಭಾರತೀಯ ವಿದೇಶಾಂಗ ಇಲಾಖೆ, ಸಿರಿಯಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಮುಂದಿನ ಸೂಚನೆವರೆಗೂ ಸಿರಿಯಾಕ್ಕೆ ಪ್ರಯಾಣಿಸಬೇಡಿ ಎಂದು ಕೇಂದ್ರ ಸಲಹೆ ನೀಡಿದೆ. ಅದಲ್ಲದೇ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಭಾರತೀಯರು ಸಿರಿಯಾ ತೊರೆಯುವಂತೆ ಸೂಚಿಸಿದೆ. ಸಿರಿಯಾವನ್ನು ತೊರೆಯಲು ಆಗದವರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಜಾಸ್ತಿ ಎಲ್ಲೂ ಪ್ರಯಾಣಿಸಲು ಹೋಗಬೇಡಿ ಎಂದು ಹೇಳಿದೆ. ಸಿರಿಯಾದಲ್ಲಿರುವ ಭಾರತೀಯ ಪ್ರಜೆಗಳು ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ ಎಂದು ತಿಳಿಸಿದ್ದು ಸಹಾಯವಾಣಿಯನ್ನೂ ತೆರೆದಿದೆ.