ದುಬೈ: ಸುಪ್ರಸಿದ್ದ ರೆಸ್ಟೋರೆಂಟ್‌ಗಳು ಮತ್ತು ಉಡುಪುಗಳ ಅಂಗಡಿಗಳಿಗೆ ಹೆಸರುವಾಸಿಯಾಗಿರುವ ದುಬೈನ ಸತ್ವಾ ಸ್ಟ್ರೀಟ್‌ನಲ್ಲಿ ಲೇಲಾಫ್‌ಶೋಂಕರ್ ಅವರು , ದಾರಿಹೋಕರ ನಡವಳಿಕೆಯನ್ನು ಪರೀಕ್ಷಿಸಲು ಪ್ರಯೋಗವೊಂದನ್ನು ನಡೆಸಿದ್ದಾರೆ.
ಬಿಎಂಡಬ್ಲ್ಯೂ ಕಾರಿನ ಹುಡ್‌ಗೆ ಚಿನ್ನದ ನೆಕ್ಲೇಸ್ ಮತ್ತು ಕಿವಿಯೋಲೆಗಳನ್ನು ಸಿಕ್ಕಿಸಿ ಹೊರಟು ಹೋದರು. ಕೆಲವು ಗಂಟೆಗಳ ಕಾಲ ಬಿಟ್ಟು ಬಂದರೂ ಚಿನ್ನದ ನೆಕ್ಲೇಸ್ ಮತ್ತು ಕಿವಿಯೋಲೆಗಳು ಹಾಗೇ ಇದ್ದವು.
ಕಂದು ಬಣ್ಣದ ವೆಸ್ಟ್ ಟಾಪ್ ಮತ್ತು ಕಪ್ಪು ಶಾರ್ಟ್ಸ್ ಧರಿಸಿದ್ದ ಲೇಲಾಫ್‌ಶೋಂಕರ್ ಸಾರ್ವಜನಿಕರ ಪ್ರತಿಕ್ರಿಯೆಯನ್ನು ವೀಕ್ಷಿಸಲು ಹತ್ತಿರದ ಆಭರಣ ಅಂಗಡಿಗೆ ತೆರಳಿದರು. ವಾಹನ ದಟ್ಟಣೆ ಹೆಚ್ಚಿದ್ದರೂ ಯಾರೂ ಕೂಡ ಲೇಲಾಫ್‌ಶೋಂಕರ್ ಅವರು ಇಟ್ಟಿದ್ದ ಚಿನ್ನವನ್ನು ದೋಚಲು ಮುಂದಾಗಲಿಲ್ಲ.
ಒಬ್ಬ ವ್ಯಕ್ತಿಯು ನೆಲಕ್ಕೆ ಬಿದ್ದ ಕಿವಿಯೋಲೆಯನ್ನು ಎತ್ತಿ ಮರಳಿ ಮತ್ತೆ ಕಾರಿನ ಮೇಲೆ ಇಟ್ಟರು. ಇದೆಲ್ಲವೂ ವಿಡಿಯೊದಲ್ಲಿ ದಾಖಲಾಗಿದೆ. ಯುಎಇಯ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ಸಾಕಷ್ಟು ವೈರಲ್ ಆಗಿದೆ. ಸುಮಾರು 2.8 ಮಿಲಿಯನ್ ಮಂದಿ ಇದನ್ನು ವೀಕ್ಷಿಸಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ದುಬೈನ ಸುರಕ್ಷತೆಯ ಬಗ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು, ನಗರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಯೋಗವು ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಬೆರಗುಗೊಳಿಸಿದೆ.
ಕ್ರಿಮಿನಲ್ ಕೃತ್ಯಗಳಿಗೆ ತ್ವರಿತ ಮತ್ತು ಕಠಿಣ ಶಿಕ್ಷೆಯ ಭಯದಿಂದ ದುಬೈನಲ್ಲಿ ಹೆಚ್ಚು ಸುರಕ್ಷತೆ ಇದೆ ಎಂದು ವಿಮರ್ಶಕರೊಬ್ಬರು ಹೇಳಿದ್ದಾರೆ. ಸುರಕ್ಷಿತ ತಾಣವಾಗಿ ದುಬೈ ಜಾಗತಿಕವಾಗಿಯೂ ಸಮೀಕ್ಷೆಗಳಲ್ಲಿ ಗುರುತಿಸಲ್ಪಟ್ಟಿದೆ. ಈ ವೈರಲ್ ವಿಡಿಯೊ ಅದಕ್ಕೆ ಸಾಕ್ಷಿಯಾಗಿದೆ. ವಿಭಿನ್ನ ಅಭಿಪ್ರಾಯಗಳ ಹೊರತಾಗಿಯೂ ಸ್ಥಳೀಯ ನಿವಾಸಿಗಳು ಮತ್ತು ಸಂದರ್ಶಕರಿಗೆ ದುಬೈ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ಅನೇಕರು ದುಬೈನ ಭದ್ರತಾ ಕ್ರಮಗಳು ಮತ್ತು ಅದರ ದುಬೈ ವಾಸಿಗಳ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಈ ಪ್ರಯೋಗದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಮಾರ್ಕೆಟಿಂಗ್ ಅಭಿಯಾನದ ಭಾಗವಾಗಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಕೆಲವರು ದುಬೈನಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡ ಘಟನೆಗಳನ್ನು ವಿವರಿಸಿದ್ದಾರೆ.