ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯ ಶುಲ್ಕ ಸಂಗ್ರಹಿಸುವ ಅಧಿಕಾರಿಗಳು ನಡೆಸಿರುವ ಗೋಲ್‌ಮಾಲ್‌ಗಳ ಕರ್ಮಕಾಂಡ ಮತ್ತಷ್ಟು ಬೆಳಕಿಗೆ ಬರುತ್ತಿದೆ. ಕಳೆದ 27 ವರ್ಷಗಳಿಂದ ಸುಮಾರು 200 ಕೋಟಿ ರೂ ಶುಲ್ಕವನ್ನು ವಸೂಲಿಯೇ ಮಾಡಿಲ್ಲ. ವಾಟರ್ ಇನ್ಸ್‌ಪೆಕ್ಟರ್ಸ್, ಮಾಪಕ ಓದುಗರು (ಮೀಟರ್ ರೀಡರ್), ನೀರಿನ ಬಿಲ್ ತಯಾರಿಸುವ ಡಾಟಾ ಆಪರೇಟರ್‌ಗಳು ಎಸಗಿರುವ ವಂಚನೆ ಸಣ್ಣ ಮೊತ್ತದ್ದಲ್ಲ.
ಅದು ಮೈಸೂರಿನ ಒಂದು ಕಾರ್ಖಾನೆ. ನಷ್ಟದಲ್ಲೇ ನಡೆಯುತ್ತಿತ್ತು. ಯಥೇಚ್ಚವಾಗಿ ನೀರು ಬಳಸುವ ಕಾರ್ಖಾನೆ ಮಾಲೀಕ ನೀರಿನ ಬಿಲ್ ಮಾತ್ರ ಪಾವತಿಸಿರಲಿಲ್ಲ. ಅಂದಾಜು 8 ಲಕ್ಷ ರೂ. ಕಟ್ಟಬೇಕಿತ್ತು. ವಾಟರ್ ಇನ್ಸ್‌ಪೆಕ್ಟರ್ ಕೃಪೆಯಿಂದ 8 ಲಕ್ಷ ಇದ್ದ ಬಿಲ್ 3 ಲಕ್ಷಕ್ಕೆ ಇಳಿಯಿತು. ಇಬ್ಬರ ನಡುವೆ ಆದ ಡೀಲ್‌ನಿಂದ ನಗರ ಪಾಲಿಕೆ ನಷ್ಟ ಎದುರಿಸಬೇಕಾಯಿತು.
ಅವರು ಸಿದ್ದಾರ್ಥನಗರದ ನಿವಾಸಿ. ಎಂದಿನಂತೆ ಬಿಲ್ ಕಲೆಕ್ಟರ್ ಬಂದು ಬಾಕಿ ಇದ್ದ ನೀರಿನ ಬಿಲ್ ಕಟ್ಟಿಸಿಕೊಂಡು ಹೋಗಿದ್ದಾನೆ. ಸಾಫ್ಟ್‌ವೇರ್ ಬ್ಯಾಂಕ್ ಎಂಡ್‌ನಲ್ಲಿ ಇದು ಎಂಟ್ರಿ ಕೂಡ ಆಗಿದೆ. ರಶೀದಿ ಕೂಡ ಮನೆ ಮಾಲೀಕನಿಗೆ ಕೊಡಲಾಗಿದೆ. ಆದರೆ, ಬಿಲ್ ಅಮೌಂಟ್ ಮಾತ್ರ ಪಾಲಿಕೆಗೆ ಸಂದಾಯವಾಗಲೇ ಇಲ್ಲ.
ಅಕ್ರಮವಾಗಿ ನೀರು ಸಂಪರ್ಕ ಪಡೆಯುವವರಿಗೆ ದಂಡ ವಿಧಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ನೀರಿನ ಕರವನ್ನು ತಮ್ಮ ಜೀಬಿಗಿಳಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಂದ ಸಂಗ್ರಹಿಸಿದ ಕುಡಿಯುವ ನೀರಿನ ಬಿಲ್ ಹಣವನ್ನು ಪಾಲಿಕೆ ಖಾತೆಗೆ ಜಮಾ ಮಾಡದೆ ಹಲವು ಸಿಬ್ಬಂದಿ ವಂಚಿಸಿದ್ದಾರೆ.
ಇದು ‘ಬೇಲಿಯೇ ಎದ್ದು ಹೊಲ ಮೇಯ್ದ’ ಕಥೆ. ವಾಣಿವಿಲಾಸ ನೀರು ಸರಬರಾಜು ಕೇಂದ್ರದ ವಾಟರ್ ಇನ್ಸ್‌ಪೆಕ್ಟರ್ಸ್, ಮಾಪಕ ಓದುಗರು (ಮೀಟರ್ ರೀಡರ್), ನೀರಿನ ಬಿಲ್ ತಯಾರಿಸುವ ಡಾಟಾ ಆಪರೇಟರ್‌ಗಳು ಮಾಡಿದ ವಂಚನೆಯಿಂದ ನಗರಪಾಲಿಕೆಗೆ ಕೋಟಿ ರೂ. ನಷ್ಟ ಉಂಟಾಗಿದೆ. ಮೇಲಿನ ಎರಡು ವಂಚನೆ ಪ್ರಕರಣಗಳು ಹಣ ಗುಳುಂ ಮಾಡಿರುವುದಕ್ಕೆ ಒಂದು ನಿದರ್ಶನವಷ್ಟೇ..!
1997ರವರೆಗೂ ಕುಡಿಯುವ ನೀರಿನ ಬಿಲ್ ಸಂಗ್ರಹ ಕಾರ್ಯವನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೇ ನಿರ್ವಹಿಸುತ್ತಿತ್ತು. ಬಳಿಕ ಆ ಜವಾಬ್ದಾರಿ ನಗರಪಾಲಿಕೆ ಹೆಗಲಿಗೆ ಬಿತ್ತು. ಇದಕ್ಕಾಗಿ ನಗರಪಾಲಿಕೆ ಇಲ್ಲಿಯವರೆಗೂ ಮೂರು ಸಾಫ್ಟ್‌ವೇರ್ ಬದಲಾಯಿಸಿದೆ. ಮೊದಲಿಗೆ 2007ರಲ್ಲಿ ಜೆಸ್ಕೋ ಬಂತು. ಅದು ಸ್ಥಗಿತಗೊಂಡ ಬಳಿಕ 2015ರಲ್ಲಿ ಬಿಸಿಐಟಿಎಸ್ ಬಂತು. ಇದೀಗ 2021ರಿಂದ ಕಿಲೋನಿಕ್ಸ್‌ನ ಸೆಮೈನಲ್ ಪ್ರೈ. ಟೆಕ್ನಾಲಜಿ ನೀರಿನ ಬಿಲ್ ಸಾಫ್ಟ್‌ವೇರ್ ಅನ್ನು ನಿರ್ವಹಣೆ ಮಾಡುತ್ತಿದೆ. ಆದರೆ, ನಗರಪಾಲಿಕೆ ಕೇಂದ್ರ ಕಚೇರಿಯಲ್ಲಿ ಈ ಸಾಫ್ಟ್‌ವೇರ್ ನಿರ್ವಹಣೆ ಆಗುತ್ತಿಲ್ಲ.
ಬದಲಿಗೆ ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲೇ ಆಗುತ್ತಿದೆ. ಅಲ್ಲದೆ, ಕಳೆದ 27 ವರ್ಷದಿಂದ ಪಾಲಿಕೆಗೆ 200 ಕೋಟಿ ರೂ. ನೀರಿನ ಕರ ವಸೂಲಿ ಬಾಕಿ ಉಳಿದಿದೆ. ಈ ಬಾಕಿ ಹಣವನ್ನು ಕಬಳಿಸಲು ಅಕ್ರಮದ ಜಾಲ ರಚನೆಯಾಗಿದೆ ಎಂಬ ಅನುಮಾನವೂ ಮೂಡಿದೆ.
ಅದೊಂದು ಪಾಳು ಬಿದ್ದ ಮನೆ. ಎಷ್ಟೋ ವರ್ಷಗಳಿಂದ ನೀರಿನ ಬಿಲ್ ಕಟ್ಟಿಲ್ಲ. ಇದೀಗ ಹೊಸದಾಗಿ ಮನೆಕಟ್ಟಲು ನೀರಿನ ಸಂಪರ್ಕಕ್ಕಾಗಿ ಅಧಿಕಾರಿಯನ್ನು ಮನೆ ಮಾಲೀಕ ಸಂಪರ್ಕಿಸುತ್ತಾನೆ. ಆಗ ಶುರುವಾಗುತ್ತೆ ಹಣದ ಚೌಕಾಸಿ. ಬಿಲ್ ಕಡಿಮೆಯಾಗುತ್ತದೆ ಎಂದು ಕೆಲವು ಗ್ರಾಹಕರು ಕೂಡ ಈ ಅಕ್ರಮದಲ್ಲಿ ಶಾಮೀಲಾಗುತ್ತಿರುವುದು ದುರಂತವೇ ಸರಿ. ಅಲ್ಲದೆ, ಕಟ್ಟಡಗಳಲ್ಲಿ ನೀರು ಸಂಪರ್ಕ ಪಡೆದವರಿಗೆ ನಕಲಿ ಬಿಲ್ ಕೊಟ್ಟು ವಂಚನೆ ಮಾಡುತ್ತಿರುವುದು ಅಕ್ರಮದ ಮತ್ತೊಂದು ಮುಖ.
ನೀರಿನ ಬಿಲ್ ಶೂನ್ಯ ಮಾಡಿ ಗ್ರಾಹಕರಿಂದ ಹಣ ಪಡೆಯುವುದೇ ಈ ಜಾಲದ ಪ್ರಮುಖ ಉದ್ದೇಶ. ಕೆಲವು ಎಂಜಿನಿಯರ್‌ಗಳ ಬಳಿ ಮಾತ್ರ ಇದರ ಪಾಸ್‌ವರ್ಡ್ ಇರುತ್ತದೆ. ಬ್ಯಾಕ್ ಎಂಡ್ ಸಪೋರ್ಟ್ ಬಳಸಿ ಅಮೌಂಟ್ ಅನ್ನು ಶೂನ್ಯ ಮಾಡಿದರೆ ಅದು ಬಿಲ್‌ನಲ್ಲೂ ಹಾಗೆ ಗೋಚರಿಸುತ್ತದೆ. ದೊಡ್ಡ ದೊಡ್ಡ ಹೋಟೆಲ್, ಲಾಡ್ಜ್, ಕಾರ್ಖಾನೆ, ಪಾಳು ಬಿದ್ದ ಮನೆ, ಹೊಸದಾಗಿ ಮನೆ ಕಟ್ಟಿಕೊಳ್ಳುವವರೇ ಇವರ ಟಾರ್ಗೆಟ್ ಆಗಿರುತ್ತಾರೆ.