ನವದೆಹಲಿ: ಡಿಸೆಂಬರ್ 8ರಂದು ರಾತ್ರಿ 11.38ರ ಸುಮಾರಿಗೆ ಡಿಪಿಎಸ್ ಆರ್ಕೆ ಪುರಂ ಮತ್ತು ಜಿಡಿ ಗೋಯೆಂಕಾ ಪಶ್ಚಿಮ್ ವಿಹಾರ್ ಸೇರಿದಂತೆ ಅನೇಕ ಶಾಲೆಗಳಿಗೆ ಈ ಬೆದರಿಕೆ ಸಂದೇಶ ಬಂದಿದೆ. ರಾಷ್ಟ್ರ ರಾಜಧಾನಿಯ 40 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, 30,000 ಡಾಲರ್ ಹಣದ ಬೇಡಿಕೆಯನ್ನು ಒಡ್ಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 8ರಂದು ರಾತ್ರಿ 11.38ರ ಸುಮಾರಿಗೆ ಡಿಪಿಎಸ್ ಆರ್ಕೆ ಪುರಂ ಮತ್ತು ಜಿಡಿ ಗೋಯೆಂಕಾ ಪಶ್ಚಿಮ್ ವಿಹಾರ್ ಸೇರಿದಂತೆ ಅನೇಕ ಶಾಲೆಗಳಿಗೆ ಈ ಬೆದರಿಕೆ ಸಂದೇಶ ಬಂದಿದೆ.
ಕಟ್ಟಡದೊಳಗೆ ಸಣ್ಣ ಮತ್ತು ಕಣ್ಣಿಗೆ ಕಾಣದಂತೆ ಬಾಂಬ್ಗಳನ್ನು ಅಡಗಿಸಿಡಲಾಗಿದೆ. ನಾನು ದೊಡ್ಡ ಅನಾಹುತವನ್ನು ಮಾಡುವುದಿಲ್ಲ. ಆದರೆ, ಬಾಂಬ್ ಸ್ಫೋಟಿಸಿದಾಗ ಹಲವು ಜನರು ಗಾಯಗೊಳ್ಳುತ್ತಾರೆ. ನೀವು ಎಲ್ಲರೂ ಹಾನಿಯಿಂದ ನಷ್ಟಕ್ಕೆ ಒಳಗಾಗುತ್ತೀರ. 30,000 ಡಾಲರ್ ಹಣ ನೀಡದಿದ್ದಲ್ಲಿ, ಬಾಂಬ್ ಸ್ಫೋಟಿಸಲಾಗುವುದು’ ಎಂದು ಬೆದರಿಕೆ ಸಂದೇಶವನ್ನು ಇಮೇಲ್ ಮೂಲಕ ಕಳುಹಿಸಲಾಗಿದೆ.
ದಿ ಮದರ್ ಮೇರಿ, ಸಲ್ವಾನ್ ಪಬ್ಲಿಕ್ ಶಾಲೆ, ಕೆಂಬ್ರಿಡ್ಜ್ ಸ್ಕೂಲ್ ಸೇರಿದಂತೆ ಅನೇಕ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದೆ.
ದಿ ಮದರ್ ಮೇರಿ ಶಾಲೆಗೆ ಕೂಡ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಕ್ಷಣಕ್ಕೆ ಪೋಷಕರಿಗೆ ಮಾಹಿತಿ ನೀಡಿ, ಮಕ್ಕಳನ್ನು ಸುರಕ್ಷಿತವಾಗಿಸುವ ಕೆಲಸ ನಡೆಸಲಾಗಿದೆ. ಈ ಕುರಿತು ಮಾತನಾಡಿರುವ ಶಾಲೆಯ ವಿದ್ಯಾರ್ಥಿ ಪೋಷಕರು, ಶಾಲೆಗೆ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣಕ್ಕೆ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ತಕ್ಷಣಕ್ಕೆ ಬಂದು ಮಕ್ಕಳ ಬಸ್ ಸ್ಟಾಪ್ನಲ್ಲಿ ನಿಮ್ಮ ಮಕ್ಕಳನ್ನು ಕರೆದೊಯ್ಯಿ. ಈ ಕುರಿತು ಬಸ್ ರೂಟ್ ಮೇಲ್ವಿಚಾರಕರು ನಿಮಗೆ ಮಾಹಿತಿ ನೀಡಲಿದ್ದು, ತಕ್ಷಣಕ್ಕೆ ಆಗಮಿಸುವಂತೆ ತಿಳಿಸಿದರು.
ಘಟನೆ ಕುರಿತು ಮಾತನಾಡಿರುವ ದೆಹಲಿ ಅಗ್ನಿ ಸೇವಾ ಅಧಿಕಾರಿ, ಡಿಪಿಎಸ್ ಆರ್ಕೆ ಪುರಂಗೆ ಬೆಳಗ್ಗೆ 7.06 ನಿಮಿಷಕ್ಕೆ ಹಾಗೂ ಜಿಡಿ ಗೋಯೆಂಕಾ ಪಶ್ಚಿಮ್ ವಿಹಾರ್ಗೆ ಬೆಳಗ್ಗೆ 6.15ಕ್ಕೆ ಸಂದೇಶ ಬಂದಿದೆ. ಅಗ್ನಿಶಾಮಕ ಸಿಬ್ಬಂದಿ, ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳ ತಂಡ ಮತ್ತು ಸ್ಥಳೀಯ ಪೊಲೀಸರು ಶಾಲೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಇಲ್ಲಿಯವರೆಗೆ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಬಂದಿಲ್ಲ. ಇನ್ನು ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಹಲವು ಶಾಲೆಗಳಿಗೆ ಬೆದರಿಕೆ ಸಂದೇಶ ವ್ಯಕ್ತವಾಗಿರುವ ಕುರಿತು ಮಾತನಾಡಿರುವ ದೆಹಲಿ ಸಿಎಂ ಅತಿಶಿ, ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ್ದು, ಕೇಂದ್ರವೂ ಭದ್ರತೆ ಒದಗಿಸುವ ಏಕೈಕ ಕರ್ತ್ಯವದಲ್ಲಿ ವಿಫಲವಾಗಿದೆ ಎಂದಿದ್ದಾರೆ.
ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಘಟನೆ ಸಂಬಂಧ ಕೇಂದ್ರದತ್ತ ಬೊಟ್ಟು ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ದೆಹಲಿ ಜನರು ಇಷ್ಟು ಕೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಹಿಂದೆಂದೂ ಕಂಡಿಲ್ಲ ಎಂದಿದ್ದಾರೆ.
ವಿಮಾನ ಸೇವೆ ಸೇರಿದಂತೆ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗಿರುವ ಹಿನ್ನೆಲೆ, ನವೆಂಬರ್ 19 ರಂದು ದೆಹಲಿ ಹೈಕೋರ್ಟ್, ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಬಾಂಬ್ ಬೆದರಿಕೆ ಮತ್ತು ಸಂಬಂಧಿತ ತುರ್ತು ಪರಿಸ್ಥಿತಿಗಳನ್ನು ಪರಿಹರಿಸಲು ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಸೇರಿದಂತೆ ಸಮಗ್ರ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲು ಸೂಚನೆ ನೀಡಿತು. ಈ ನಿರ್ದೇಶನಗಳನ್ನು ಪೂರ್ಣಗೊಳಿಸಲು ನ್ಯಾಯಾಲಯ ಎಂಟು ವಾರಗಳ ಗಡುವನ್ನು ನೀಡಿತು.
ಈ ಕುರಿತು ಎಕ್ಸ್ ತಾಣದಲ್ಲಿ ಅಸಮಾಧಾನ ಹೊರ ಹಾಕಿರುವ ಅವರು, ‘ದೆಹಲಿಯಲ್ಲಿ ದಿನನಿತ್ಯದ ಸುಲಿಗೆ, ಕೊಲೆ, ಗುಂಡಿನ ದಾಳಿಯ ಘಟನೆಗಳ ನಂತರ ಈಗ ಶಾಲೆಗಳ ಮೇಲೆ ಬಾಂಬ್ ದಾಳಿಯ ಬೆದರಿಕೆಗಳು ಬರುತ್ತಿವೆ. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹಿಂದೆಂದಿಗಿಂತೂ ಹದಗೆಟ್ಟಿದೆ. ದೆಹಲಿಯ ಜನತೆಗೆ ಭದ್ರತೆ ಒದಗಿಸುವ ಏಕೈಕ ಕಾರ್ಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ಹರಿಹಾಯ್ದಿದ್ದಾರೆ.