ಬೆಳಗಾವಿ : ಸುವರ್ಣಸೌಧದಲ್ಲಿ ಸೋಮವಾರ ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ತೈಲಚಿತ್ರ ಅನಾವರಣಗೊಳ್ಳಲಿದೆ. ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ‘ಅನುಭವ ಮಂಟಪ’ದ ಬೃಹತ್ ತೈಲವರ್ಣ ಚಿತ್ರದ ಅನಾವರಣಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಸಾಕ್ಷಿಯಾಗುತ್ತಿದೆ.
12ನೇ ಶತಮಾನದಲ್ಲಿ ಇಂದಿನ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ‘ಅನುಭವ ಮಂಟಪ’ ನಿರ್ಮಿಸಲಾಗಿತ್ತು. ಆ ಅನುಭವ ಮಂಟಪ ಚಿತ್ರವನ್ನು ನಾಳೆಯಿಂದ ಸುವರ್ಣಸೌಧದಲ್ಲಿ ಕಣ್ತುಂಬಿಕೊಳ್ಳಬಹುದು.
ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಲ್ಪಟ್ಟ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಭವ ಮಂಟಪದ ವಿಶೇಷ ಚಿತ್ರವನ್ನು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ನೇತೃತ್ವದಲ್ಲಿ ಪ್ರಖ್ಯಾತ ಕಲಾವಿದರಾದ ಬೆಂಗಳೂರಿನ ಸತೀಶ್ ರಾವ್, ಶಿವಮೊಗ್ಗದ ಶ್ರೀಕಾಂತ್ ಹೆಗಡೆ ಸಿದ್ದಾಪುರ, ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾ ಶಾಲೆಯ ಅಶೋಕ್ ಯು, ಜಗಳೂರು ರಾಜಾ ರವಿವರ್ಮ ಕಲಾ ಶಾಲೆಯ ರೂಪಾ ಎಂ.ಆರ್., ಬೈಲಹೊಂಗಲದ ವೀರಣ್ಣ ಮಡಿವಾಳಪ್ಪ ಬಬ್ಲಿ, ಜಮಖಂಡಿಯ ಮಹೇಶ ನಿಂಗಪ್ಪ ದಫಲಾಪುರ ಸೇರಿಕೊಂಡು ಸತತ 25 ದಿನ ಶ್ರಮಿಸಿ, ಬಿಡಿಸಿದ್ದಾರೆ.
“ಇದು ಕೇವಲ ಒಂದು ತೈಲವರ್ಣ ಚಿತ್ರ ಅನಾವರಣ ಕಾರ್ಯಕ್ರಮವಲ್ಲ. ಬದಲಾಗಿ, ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯಗಳು, ಸಮಾನತೆ, ಮಾನವೀಯ ಸಂದೇಶಗಳನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸುವ ಕಾರ್ಯ” ಎಂದು ಯು.ಟಿ.ಖಾದರ್ ಅವರು ತಿಳಿಸಿದರು.
“ಅನುಭವ ಮಂಟಪಕ್ಕೆ ಒಂದು ದೊಡ್ಡ ಇತಿಹಾಸ, ಪರಂಪರೆ ಇದೆ. 12ನೇ ಶತಮಾನದ ಸಾಮಾಜಿಕ ಕಾಲಘಟ್ಟದಲ್ಲೇ ವಿಶ್ವಗುರು ಬಸವಣ್ಣನವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದರು. ನಮ್ಮ ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉದ್ದೇಶದಿಂದಾಗಿ ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸಂದೇಶ ನೀಡಲು ನಾಳೆ ಚಿತ್ರವನ್ನು ಅನಾವರಣಗೊಳಿಸಲಾಗುತ್ತಿದೆ” ಎಂದು ತಿಳಿಸಿದರು.
“ಬಸವಣ್ಣನವರ ನೇತೃತ್ವದಲ್ಲಿ ರಚನೆಯಾದ ಅನುಭವ ಮಂಟಪ ಶೂನ್ಯಪೀಠದ ಮೊದಲ ಅಧ್ಯಕ್ಷರು ಅಲ್ಲಮಪ್ರಭುಗಳು. ಅವರ ಜೊತೆಗೆ ಶಿವಯೋಗಿ ಸಿದ್ದರಾಮೇಶ್ವರ, ಅವಿರಳ ಜ್ಞಾನಿ ಚನ್ನಬಸವಣ್ಣ, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, ಕೇತಲದೇವಿ, ದುಗ್ಗಳೆ, ಕಾಳವ್ವ ಸೇರಿ 770 ಅಮರಗಣಂಗಳು ಸೇರಿ ಅನೇಕ ಶರಣರು ತಮ್ಮ ದಿವ್ಯ ಚಿಂತನೆ ಮತ್ತು ಅನುಭವಗಳನ್ನು ವಚನಗಳ ಮೂಲಕ ಜಗತ್ತಿಗೆ ಪರಿಚಯಿಸಿದ ಪುಣ್ಯ ಸ್ಥಳವಾಗಿತ್ತು” ಎಂದು ಲಿಂಗಾಯತ ಮುಖಂಡ ಮಹಾಂತೇಶ ಗುಡಸ ಅವರು ತಿಳಿಸಿದರು.
ಚಿತ್ರಕಲಾ ಪರಿಷತ್ತಿನ ಸಿಬ್ಬಂದಿ ಗಂಗಾಧರ ಮಾತನಾಡಿ, “ಆಯಿಲ್ ಬಣ್ಣ ಬಳಸಿ ಕ್ಯಾನ್ವಾಸ್ ಮೇಲೆ ಅನುಭವ ಮಂಟಪ ಚಿತ್ರ ಬಿಡಿಸಲಾಗಿದೆ. 7 ಕಲಾವಿದರು ಇದರಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ. ತುಂಬಾ ಅದ್ಭುತವಾಗಿ ಚಿತ್ರ ಮೂಡಿಬಂದಿದೆ. ಚಿತ್ರ ನೋಡಿದವರು ನಿಜಕ್ಕೂ ಮೆಚ್ಚಿಕೊಳ್ಳುತ್ತಾರೆ” ಎಂದರು.
ಮುಂದುವರೆದು ಮಾತನಾಡಿದ ಅವರು, “ಅನುಭವ ಮಂಟಪದ ಚಿತ್ರ ಉತ್ತರ ಕರ್ನಾಟಕದ ಶಕ್ತಿಕೇಂದ್ರ ಸುವರ್ಣ ವಿಧಾನಸೌಧದಲ್ಲಿ ಉದ್ಘಾಟನೆ ಆಗುತ್ತಿರುವುದು ಸಂತಸ ಮತ್ತು ಸ್ವಾಗತಾರ್ಹ. ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಈಗ ಮತ್ತೊಂದು ಐತಿಹಾಸಿಕ ನಿರ್ಧಾರ ಘೋಷಿಸಿದ್ದಕ್ಕೆ ಅವರಿಗೆ ಅಭಿನಂದನೆಗಳು” ಎಂದು ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ 19ರವರೆಗೆ 9 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಬಾರಿಯ ಅಧಿವೇಶನವನ್ನು ಸ್ಮರಣೀಯಗೊಳಿಸಲು ಸೌಧದ ಮೊದಲ ಮಹಡಿಯಲ್ಲಿ ‘ಅನುಭವ ಮಂಟಪ’ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ.
ಈ ವೇಳೆ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಡಿಸಿಎಂ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.