ಕಾರವಾರ (ಉತ್ತರ ಕನ್ನಡ): ಬ್ರಿಟೀಷರ ವಿರುದ್ಧ ಮಾತನಾಡಲು ಇಂಗ್ಲೀಷ್ ಭಾಷೆ ಬಾರದೇ ದಿಂಡಿ ಹಬ್ಬದ ವೇಳೆ ವಿವಿಧ ಸಮುದಾಯದ ಜನರಿಂದ ನಡೆಯುತ್ತಿದ್ದ ವಿಡಂಬನಾತ್ಮಕ ಹಗರಣದ ಪ್ರದರ್ಶನ ಕಾರವಾರದ ಅಮದಳ್ಳಿಯಲ್ಲಿ ಇಂದಿಗೂ ಮುಂದುವರೆದಿದೆ. ಭಾನುವಾರ ರಾತ್ರಿ ನಡೆದ ಈ ಹಗರಣ ನೆರೆದವರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಬ್ರಿಟೀಷರ ಕಾಲದಿಂದಲೂ ಹಾಲಕ್ಕಿ ಸಮುದಾಯವರು ನಡೆಸುತ್ತಿದ್ದ ಹಗರಣ ಉತ್ಸವವನ್ನು ಇಂದಿಗೂ ಕೂಡ ಜನರು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಕಾರವಾರದಲ್ಲಿ ‘ಹಾಲಕ್ಕಿ ಹಗರಣ’ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಬಾರಿಯ ಹಗರಣ ಉತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ‘ಕಾಂತಾರ’ ಚಿತ್ರದ ದೈವ ನರ್ತಕ, ಬೃಹತ್ ಗಾತ್ರದ ಪಂಜುರ್ಲಿ ದೈವದ ಪ್ರದರ್ಶನವು ನೆರೆದ ಜನರ ಮೆಚ್ಚುಗೆಗೆ ಪಾತ್ರವಾದವು. ಇದರೊಂದಿಗೆ ಬೃಹತ್ ಗಾತ್ರದ ತೋಳ, ಹನುಮಂತ, ಬಲೀಂದ್ರ, ದೈತ್ಯ ಕಾಡು ಪ್ರಾಣಿ, ಬೇಡರ ವೇಷ ಹಾಗೂ ವಿವಿಧ ದೇವರ ಮಾದರಿಗಳೊಂದಿಗೆ ಹತ್ತು ಹಲವು ಅಣಕು ಪ್ರದರ್ಶನ ನಡೆದವು.
ಹೌದು, ಕಾರವಾರ ತಾಲೂಕಿನ ಅಮದಳ್ಳಿಯ ದಿಂಡಿ ಹಬ್ಬವು ಸಮಾಜದ ಪ್ರಮುಖ ಘಟನೆಗಳನ್ನು ವೈಚಾರಿಕವಾಗಿ ವಿಡಂಬನೆಗೆ ಹಚ್ಚುವ ಆಚರಣೆಯೊಂದಿಗೆ ಈಗಲೂ ಆಕರ್ಷಣೆಯ ಕೇಂದ್ರ ಬಿಂದುವಾಗಿ ಉಳಿದಿದೆ. ದಿಂಡಿ ಜಾತ್ರೆಯಲ್ಲಿ ಹತ್ತಾರು ಹಗರಣ ವೇಷಧಾರಿಗಳ ಮೆರವಣಿಗೆ, ಭಿನ್ನ ವಿಭಿನ್ನ ವೇಷಗಳನ್ನು ತೊಟ್ಟು ಅಣಕು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.
”ಹಗರಣ ಉತ್ಸವದಲ್ಲಿ ಮಾಡುವ ಅಣುಕು ಪ್ರದರ್ಶನಕ್ಕೆ ತಿಂಗಳಿಂದಲೂ ತಯಾರಿ ಮಾಡಿಕೊಳ್ಳಲಾಗುತ್ತದೆ. ನಮಗೆ ಇದಕ್ಕೆ ಯಾರ ಆರ್ಥಿಕ ಸಹಾಯವೂ ಇರುವುದಿಲ್ಲ. ಸಾಮಾನ್ಯವಾಗಿ ಗದ್ದೆ ಕೊಯ್ಲು ಮುಗಿಸಿದ ಬಳಿಕ ಬರುವ ಈ ಹಬ್ಬಕ್ಕೆ ಊರಿನವರೇ ಸೇರಿ ಸಿದ್ಧತೆ ಮಾಡಿಕ್ಕೊಳ್ಳುತ್ತೇವೆ. ತುಂಬಾ ಖರ್ಚು ಬರುತ್ತದೆ.
ಈ ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬಂದಿರುವ ಕಾರಣ ಇಂದಿಗೂ ತಮ್ಮವರ ಸಂಪ್ರದಾಯವನ್ನು ಬೆಳೆಸುವ ನಿಟ್ಟಿನಲ್ಲಿ ಹಾಲಕ್ಕಿ ಹಾಗೂ ಇನ್ನಿತರ ಸಮುದಾಯದವರೇ ಹಗರಣವನ್ನು ನಡೆಸುತ್ತಾ ಬಂದಿದ್ದಾರೆ” ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ರಾಮದ ನಾರಾಯಣ ದೇವರ ಜಾತ್ರಾ ಮಹೋತ್ಸವವನ್ನೂ ಪ್ರತಿವರ್ಷ ನಡೆಸಲಾಗುತ್ತದೆ. ಗ್ರಾಮದ ಜನರು ಕಾರ್ತಿಕ ಮಾಸದಲ್ಲಿ ಆಚರಿಸುವ ನಾರಾಯಣ ದೇವರ ಜಾತ್ರೆಯು ‘ದಿಂಡಿ ಜಾತ್ರೆ’ ಎಂದೇ ಪ್ರಸಿದ್ಧವಾಗಿದೆ.
ಬ್ರಿಟೀಷರ ಕಾಲದಿಂದಲೂ ಹಾಲಕ್ಕಿ ಸಮುದಾಯದವರು ಈ ಹಗರಣ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಿಂದೆ ಬ್ರಿಟೀಷರ ದಬ್ಬಾಳಿಕೆಯನ್ನು ತಿಳಿಸಲು ಇಂಗ್ಲೀಷ್ ಭಾಷೆ ಬಾರದ ಹಿನ್ನೆಲೆಯಲ್ಲಿ ಹಾಲಕ್ಕಿ ಸಮುದಾಯವರು ಹಗರಣ ಉತ್ಸವದ ಮೂಲಕ ಅಣುಕು ಪ್ರದರ್ಶನದಂತೆ ವೇಷ ತೊಟ್ಟು ಆಂಗ್ಲರಿಗೆ ತಿಳಿಸುತ್ತಿದ್ದರಂತೆ.
ನಂತರದ ದಿನಗಳಲ್ಲಿ ಇದೊಂದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ. ಹೊರ ಜಿಲ್ಲೆ, ರಾಜ್ಯದ ಸಾವಿರಾರು ಜನ ಆಗಮಿಸಿ ಹಗರಣದ ಆಕರ್ಷಣೆಯನ್ನು ಕಣ್ತುಂಬಿಕೊಂಡರು.