ಮಂಡ್ಯ: ನಾಡು ಕಂಡ ಧೀಮಂತ ನಾಯಕ ಎಸ್.ಎಂ.ಕೃಷ್ಣ ಅವರನ್ನು ಕರುನಾಡು ಕಳೆದುಕೊಂಡಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.
ಅದೇ ರೀತಿ ಕೃಷ್ಣ ಅವರು ದೇಹ ತ್ಯಾಗ ಮಾಡುವುದಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ದೇವಾಲಯ ಒಂದರ ಜೀರ್ಣೋದ್ಧಾರ ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಬರೋಬ್ಬರಿ 45 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಯ ಆಂಜನೇಯಸ್ವಾಮಿ, ಮಾರಮ್ಮ, ಬೋರೆ ದೇವೇರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮಾಡಿದ್ದರು. ಇನ್ನು ಪೂಜಾ ಕಾರ್ಯದಲ್ಲಿ ಎಸ್.ಎಂ.ಕೆ ಪುತ್ರಿ ಶಾಂಭವಿ ಭಾಗಿಯಾಗಿದ್ದರು.
ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಕೃಷ್ಣ ಅವರು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜನರ ಒಳಿತಿಗಾಗಿ ಕೊಟ್ಟು ಹೋಗಿದ್ದಾರೆ. ನಮ್ಮನ್ನೆಲ್ಲ ಅಗಲುವ ಒಂದು ವಾರದ ಹಿಂದಷ್ಟೇ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ವಿಚಾರವಾಗಿ ಪತ್ರ ಬರೆದಿದ್ದರು. ಅಂದರೆ ಬದುಕಿನ ಕೊನೆಯ ಘಳಿಗೆವರೆಗೂ ಅವರು ಕನ್ನಡಕ್ಕಾಗಿ, ನಾಡು, ನುಡಿಗಾಗಿ ಹಂಬಲಿಸುತ್ತಿದ್ದರು.
ಕಾಕತಾಳೀಯ ಎಂಬಂತೆ 48 ದಿನಗಳ ಮಂಡಲ ಪೂಜೆ ಬಳಿಕ ಎಸ್‌ಎಂಕೆ ವಿಧಿವಶರಾಗಿದ್ದಾರೆ. ದೇವರ ಆಶಯವೇನೋ ಎಂಬಂತೆ ಪೂಜೆ ಮುಗಿದ ಬಳಿಕ ಕೃಷ್ಣ ಅವರು ಬದುಕಿನ ಪಯಣವನ್ನು ಮುಗಿಸಿದ್ದಾರೆ. ಬದುಕಿನ ಕೊನೆ ಕ್ಷಣದವರೆಗೂ ಒಳಿತನ್ನೇ ಬಯಸಿದ ಎಸ್‌ಎಂ ಕೃಷ್ಣ ಅವರ ಸೇವೆಯನ್ನ ಕಂಡು ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.