ಮುಂಬಯಿ: ಆರ್ಥಿಕ ಹಿಂಜರಿತ ಹಲವು ಕಾರಣಗಳಿಂದ ಆಗಿದೆಯೇ ಹೊರತು ಆರ್ಬಿಐ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿರುವುದಕ್ಕಲ್ಲ ಎಂದು ನಿರ್ಗಮಿತ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಶಕ್ತಿಕಾಂತ್ ದಾಸ್ ಅವರದ್ದು ಕೊನೆಯ ಕೆಲಸದ ದಿನವಾಗಿತ್ತು, ಹೀಗಾಗಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿ ಹಲವು ವಿಚಾರಗಳನ್ನು ಸ್ಪಷ್ಟಪಡಿಸಿದರು. ಬಡ್ಡಿ ದರ ನಿಗದಿಯನ್ನು ತುಂಬ ಸರಳವಾಗಿ ಪರಿಭಾವಿಸಬಾರದು ಎಂದಿರುವ ಅವರು, ಬೆಳವಣಿಗೆ ಎಂಬುದು ಹಲವು ಅಂಶಗಳಿಂದ ನಿರ್ಧಾರಿತವಾಗುತ್ತದೆ ಎಂಬುದನ್ನು ಮರೆಯಬಾರದು ಎಂದಿದ್ದಾರೆ.
ಹಲವು ಕಾರಣಗಳಿಂದ ಆರ್ಥಿಕ ಹಿಂಜರಿತವಾಗಿದೆಯೇ ಹೊರತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿ ಕೊಂಡಿರುವುದಕ್ಕಲ್ಲ ಎಂದು ಕೇಂದ್ರೀಯ ಬ್ಯಾಂಕ್ನ ನಿರ್ಗಮಿತ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಶಕ್ತಿಕಾಂತ್ ದಾಸ್ ಅವರದ್ದು ಕೊನೆಯ ಕೆಲಸದ ದಿನವಾಗಿತ್ತು, ಹೀಗಾಗಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದರು.”ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಆರ್ಬಿಐ ಮುಂದಿರುವ ಪ್ರಮುಖ ಕಾರ್ಯವಾಗಿದೆ,” ಎಂದಿದ್ದಾರೆ. ಇವರು ಆರ್ಬಿಐ ಗವರ್ನರ್ ಆಗಿದ್ದ 6 ವರ್ಷಗಳ ಕಾಲಾವಧಿಯಲ್ಲಿ ಕೋವಿಡ್ ಸಾಂಕ್ರಮಿಕ ರೋಗದ ಸಂಕಷ್ಟ, ಉಕ್ರೇನ್ ಸಂಘರ್ಷ ಮತ್ತು ಮಧ್ಯಪ್ರಾಚ್ಯ ಬಿಕ್ಕಟ್ಟಿನಂತಹ ಪರಿಸ್ಥಿತಿಗಳಿತ್ತು ಎಂಬುದು ಗಮನಾರ್ಹ.
ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸತತ 11 ಸಭೆಗಳಲ್ಲಿ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತು. ಕಳೆದ 2 ವರ್ಷಗಳಿಂದ ಬಡ್ಡಿದರ ಇದ್ದಂತೆಯೇ ಇದೆ. ಇದು ಹಣಕಾಸು ನೀತಿ ಸಮಿತಿಯ ಸರ್ವಾನುಮತದ ನಿರ್ಣಯ ಎನ್ನುವುದಕ್ಕಿಂತ ಬಹುಮತದ ಒತ್ತಾಸೆಯಿಂದ ಕೈಗೊಂಡ ನಿರ್ಧಾರವಾಗಿದೆ.
“ಬಡ್ಡಿ ದರ ನಿಗದಿಯನ್ನು ತುಂಬ ಸರಳವಾಗಿ ಪರಿಭಾವಿಸಬಾರದು,” ಎಂದು ತಿಳಿ ಹೇಳಿರುವ ಅವರು, “ಬೆಳವಣಿಗೆ ಎಂಬುದು ಹಲವು ಅಂಶಗಳಿಂದ ನಿರ್ಧಾರಿತವಾಗುತ್ತದೆ ಎಂಬುದನ್ನು ಮರೆಯಬಾರದು, ಹೀಗಾಗಿ ನಾವು ಬದಲಿಗಳ ಪೈಕಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಂಡಿದ್ದೇವೆ,” ಎಂದು ಅವರು ರೆಪೋ ದರ ಬದಲಾಯಿಸದ ನಿಲುವನ್ನು ಸಮರ್ಥಿಸಿಕೊಂಡರು.
ಆದರೆ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ನಿಜವಾದ ಜಿಡಿಪಿ ಬೆಳವಣಿಗೆಯು ಏಳು ತ್ರೈಮಾಸಿಕದಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ ಶೇ. 5.4ಕ್ಕೆ ತಲುಪಿದೆ ಎಂದು ಅಧಿಕೃತ ಅಂಕಿ-ಅಂಶಗಳು ಸೂಚಿಸಿದ ನಂತರ ಬಡ್ಡಿ ದರ ಇಳಿಕೆ ಕೂಗು ಹೆಚ್ಚಿದೆ.
”ಸಂಜಯ್ ಮಲ್ಹೋತ್ರಾ ಅವರು ಬಹಳ ವ್ಯಾಪಕ ಅನುಭವವನ್ನು ಹೊಂದಿದ್ದಾರೆ ಮತ್ತು ಸಂಸ್ಥೆಗೆ ಅತ್ಯುತ್ತಮವಾದದ್ದನ್ನು ಮಾಡುತ್ತಾರೆ,” ಎಂದು ಪ್ರಶಂಸಿಸಿದರು.
ಮಂಗಳವಾರ ಆರ್ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ, “ಎಲ್ಲ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆರ್ಥಿಕತೆಗೆ ಉತ್ತಮವಾದದ್ದನ್ನು ಮಾಡಲು ಕೆಲಸ ಮಾಡುತ್ತೇನೆ,” ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಮಂಗಳವಾರ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ್ ಗೋಯಲ್ ಬಡ್ಡಿ ದರ ಇಳಿಕೆಗೆ ಒತ್ತಾಯಿಸಿದ್ದರು.