ಕೊಪ್ಪಳ: ಹನುಮ ಉದಯಿಸಿದ ಜನ್ಮ ಸ್ಥಳ ಖ್ಯಾತಿಯ ಅಂಜನಾದ್ರಿಯಲ್ಲಿ ಇಂದಿನಿಂದ ಅಂಜನಿಸುತನ ಸ್ಮರಣೆ ನಡೆಯಲಿದೆ. ಡಿ.12 ಮತ್ತು 13 ರಂದು ನಡೆಯಲಿರುವ ಹನುಮಮಾಲೆ ಕಾರ್ಯಕ್ರಮದ ಸಿದ್ಧತೆಗಳು ಪೂರ್ಣಗೊಂಡಿವೆ.ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಲಕ್ಷಾಂತರ ಭಕ್ತಾದಿಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಹನುಮ ಜನ್ಮಸ್ಥಳ ಅಂಜನಾದ್ರಿಯಲ್ಲಿ ಇಂದಿನಿಂದ ಹನುಮ ಸ್ಮರಣೆ ನಡೆಯಲಿದ್ದು, ಹನುಮಮಾಲೆ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತಾದಿಗಳು ಬರಲಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಾರಿಗೆ, ನೀರು, ಶೌಚಾಲಯದ ವ್ಯವಸ್ಥೆ, ಸ್ವಚ್ಛತೆ, ಪಾರ್ಕಿಂಗ್ ಮೊದಲಾದ ಮೂಲಸೌಕರ್ಯಗಳನ್ನು ಮಾಡಿದೆ. ಎರಡು ದಿನ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಹಾಯವಾಣಿಗಳನ್ನು ತೆರೆಯಲಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದ್ದು, ಸಾರ್ವಜನಿಕ ವಾಹನಗಳಿಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮಟ್ಟದಲ್ಲಿ ಹನುಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಎರಡು ದಿನ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಮತ್ತು ಪಾರ್ಕಿಂಗ್ ಸ್ಥಳಗಳ ಸ್ವಚ್ಛತೆ, ಪಾದಚಾರಿ ಮಾರ್ಗ ನಿರ್ಮಾಣ, ಭಕ್ತರಿಗೆ ಕುಡಿಯುವ ನೀರು ಮತ್ತು ಸ್ನಾನಕ್ಕಾಗಿ ನೂರಾರು ನೀರಿನ ಟ್ಯಾಟ್ ಅಳವಡಿಸಲಾಗಿದೆ.
ಗಂಗಾವತಿ, ಹೊಸಪೇಟೆ, ಹುಲಿಗಿ ಮಾರ್ಗವಾಗಿ ಬರುವ ಭಕ್ತರು ಹಾಗೂ ಸಾರ್ವಜನಿಕರ ವಾಹನಗಳಿಗಾಗಿ ಆನೆಗುಂದಿ ಉತ್ಸವ ಸ್ಥಳ, ಹನುಮನಹಳ್ಳಿ ಹತ್ತಿರ, ದೇವಸ್ಥಾನ ಹಿಂಭಾಗ, ಪಂಪಾಸರೋವರ ಹತ್ತಿರ ಹಾಗೂ ಇತರೆಡೆ ಒಟ್ಟು 15 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸರಕಾರಿ ವಾಹನ ನಿಲುಗಡೆಗೆ ಅಂಜನಾದ್ರಿ ದೇವಸ್ಥಾನದ ಮುಂಭಾಗದಲ್ಲಿ ಸ್ಥಳ ನಿಗದಿಪಡಿಸಿದೆ.
ಆನೆಗೊಂದಿಯಿಂದ ಅಂಜನಾದ್ರಿಯವರೆಗೆ ಎರಡು ಮಿನಿ ಬಸ್‌ಗಳು ಶುಲ್ಕ ರಹಿತವಾಗಿ ಸಂಚರಿಸಲಿವೆ. ಇತರ ಜತೆಗೆ ಗಂಗಾವತಿ, ಹೊಸಪೇಟೆ, ಕೊಪ್ಪಳದಿಂದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ವಿಶೇಷ ಬಸ್ಸಿನ ವ್ಯವಸ್ಥೆ ಇರಲಿದೆ. ಭಕ್ತರ ಆರೋಗ್ಯ ದೃಷ್ಟಿಯಿಂದ ತುರ್ತು ಸೇವೆಗಾಗಿ ವೈದ್ಯರು ಮತ್ತು ಅಗತ್ಯ ಔಷಧಗಳೊಂದಿಗೆ 2 ಆಂಬ್ಯುಲೆನ್ಸ್ ಕಾಯ್ದಿರಿಸಲಾಗಿದೆ.
ದೇವಸ್ಥಾನದ ಪಾರ್ಕಿಂಗ್‌ನಲ್ಲಿ ಒಂದು ಚಿಕಿತ್ಸಾಲಯ, ವೇದಪಾಠ ಶಾಲೆಯ ಹತ್ತಿರ ಮತ್ತೊಂದು ಚಿಕಿತ್ಸಾಲಯ, ಬೆಟ್ಟದ ಮೇಲೆ ದೇವಸ್ಥಾನದ ಹತ್ತಿರ ಔಷಧಗಳೊಂದಿಗೆ ವೈದ್ಯರ ತಂಡ, ಬೆಟ್ಟ ಹತ್ತುವ ಮತ್ತು ಇಳಿಯುವ ಮಧ್ಯದಲ್ಲಿ 2 ವೈದ್ಯಕೀಯ ತಂಡಗಳ ವ್ಯವಸ್ಥೆ ಮಾಡಲಾಗಿದೆ.
ಅಂಜನಾದ್ರಿಯಲ್ಲಿ ನಿರ್ಮಿತಿ ಕೇಂದ್ರದಿಂದ ಒಟ್ಟು 73 ಶೌಚಾಲಯ ನಿರ್ಮಿಸಲಾಗಿದೆ. ಇದರಲ್ಲಿ60 ತಾತ್ಕಾಲಿಕ ಶೌಚಾಲಯಗಳು ಸೇರಿವೆ. ಚಿಂತಾಮಣಿ 05, ದೇವಸ್ಥಾನದ ಪಾರ್ಕಿಂಗ್ 18, ಆನೆಗೊಂದಿ ಪಾರ್ಕಿಂಗ್ 10, ದುರ್ಗಾದೇವಿ ಬೆಟ್ಟದ ಹತ್ತಿರ 10, ಪಂಪಾಸರೋವರ 10, ಹನುಮನಹಳ್ಳಿ ಹತ್ತಿರ 10, ವೇದ ಪಾಠ ಶಾಲೆ ಹತ್ತಿರ 10 ಸೇರಿ 73 ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.
140 ಕಡೆ ಸ್ನಾನದ ತಾತ್ಕಾಲಿಕ ಶವರ್ ಅಳವಡಿಸಲಾಗಿದೆ. ಈ ಪೈಕಿ ದೇವಸ್ಥಾನದ ಪಾರ್ಕಿಂಗ್ 50, ಆನೆಗೊಂದಿ ಪಾರ್ಕಿಂಗ್ 25, ದುರ್ಗಾದೇವಿ ಬೆಟ್ಟದ ಹತ್ತಿರ 20, ಪಂಪಾ ಸರೋವರ 25, ಹನುಮನಹಳ್ಳಿ ಹತ್ತಿರ 20 ಶವರ್ ಅಳವಡಿಸಲಾಗಿದೆ.
ಭಕ್ತಾದಿಗಳ ಅನುಕೂಲಕ್ಕಾಗಿ ಗಂಗಾವತಿ ರೈಲು ನಿಲ್ದಾಣ, ಬಸ್ ನಿಲ್ದಾಣ, ಆನೆಗುಂದಿಯ ಶ್ರೀ ಕೃಷ್ಣದೇವರಾಯ ವೃತ್ತ ಹಾಗೂ ಅಂಜನಾದ್ರಿ ದೇವಸ್ಥಾನದ ಮುಂಭಾಗದಲ್ಲಿ ಬ್ಯಾನರ್‌ನೊಂದಿಗೆ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಪೊಲೀಸರು ಒಳಗೊಂಡ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ.