ಭದ್ರಾದ್ರಿ ಕೊಥಗುಡೆಂ(ತೆಲಂಗಾಣ): ರಸ್ತೆ ಸೌಲಭ್ಯ ಇಲ್ಲದ ಕಾರಣ ಗರ್ಭಿಣಿ ಮಲಗಿದ್ದ ಮರದ ಮಂಚಕ್ಕೆ ಕೋಲು ಕಟ್ಟಿ, ಸ್ಟ್ರೆಚರ್ನಂತೆ ಗ್ರಾಮಸ್ಥರು ಮೂರು ಕಿ.ಮೀ ಹೊತ್ತೊಯ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಡಿಜಿಟಲ್ ಕ್ರಾಂತಿಯತ್ತ ಭಾರತ ಮುನ್ನುಗ್ಗುತ್ತಿದೆ. ಆದರೆ, ಮತ್ತೊಂದೆಡೆ ದೇಶದ ಅನೇಕ ಕುಗ್ರಾಮಗಳು ಇಂದಿಗೂ ಮೂಲಸೌಕರ್ಯಗಳಿಂದ ವಂಚಿತವಾಗಿವೆ.
ಹೊಸ ನಿದರ್ಶನ ತೆಲಂಗಾಣದ ಛರ್ಲಾ ಮಂಡಲ್ನಲ್ಲಿನ ರಲ್ಲಪುರಂ ಗ್ರಾಮದಲ್ಲಿ ಸಿಕ್ಕಿದೆ. ಕನಿಷ್ಠ ಮೂಲಭೂತ ಸೌಲಭ್ಯವಾದ ರಸ್ತೆಯೇ ಇಲ್ಲದ ಕಾರಣ ಗರ್ಭಿಣಿ ಮಲಗಿದ್ದ ಮರದ ಮಂಚಕ್ಕೆ ಕೋಲು ಕಟ್ಟಿ, ಸ್ಟ್ರೆಚರ್ನಂತೆ ಮಾಡಿ ಗ್ರಾಮಸ್ಥರು ಮೂರು ಕಿ.ಮೀ ಹೊತ್ತೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಕುಂಜಮ್ ಮಾಯೆ ಎಂಬ ಮಹಿಳೆ ಫಿಟ್ಸ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಆರೋಗ್ಯ ತೀರಾ ಹದಗೆಟ್ಟಿತ್ತು. ನರ್ಸ್ ಪ್ರಾರ್ಥಮಿಕ ಚಿಕಿತ್ಸೆ ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು.
ಹೀಗಾಗಿ, ಹತ್ತಿರದ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಯಿತು. 108 ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ, ರಸ್ತೆ ಇಲ್ಲದ ಕಾರಣ ವಾಹನ ಮಹಿಳೆ ಇರುವ ಸ್ಥಳ ತಲುಪಲು ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದಿಂದ ಮೂರು ಕಿ.ಮೀ ದೂರದ ಕೊಳದ ಬಳಿ ಆಂಬುಲೆನ್ಸ್ ನಿಲ್ಲಿಸುವುದಾಗಿ ಚಾಲಕ ತಿಳಿಸಿದ್ದಾನೆ. ಇದಕ್ಕೊಪ್ಪಿದ ಗ್ರಾಮಸ್ಥರು ಮತ್ತು ಆಕೆಯ ಪತಿ ಗರ್ಭಿಣಿಯನ್ನು ಎತ್ತಿಕೊಂಡು ಅಷ್ಟೂ ದೂರ ಸಾಗಿಸಿದ್ದಾರೆ.
ಬಳಿಕ ಆಂಬುಲೆನ್ಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸತ್ಯಾನಾರಾಯಣಪುರಂನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಅಲ್ಲಿ ತಪಾಸಣೆ ನಡೆಸಿದ ವೈದ್ಯರು, ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಭದ್ರಾಚಲಂನ ಸರ್ಕಾರಿ ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದ್ದಾರೆ.