ನವದೆಹಲಿ: ಖಾಲಿ ಇರುವ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಹುದ್ದೆಗಳ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದೆ. ದೇಶದ ಆಡಳಿತಕ್ಕೆ ಪ್ರಮುಖವಾಗಿ ಬೇಕಾಗಿರುವ ಐಎಎಸ್, ಐಪಿಎಸ್ ಹುದ್ದೆಗಳು ಖಾಲಿ ಇರುವ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಗುರುವಾರ ಮಾಹಿತಿ ಹಂಚಿಕೊಂಡಿದೆ. ಇದರಂತೆ, ದೇಶದಲ್ಲಿ ಸದ್ಯ 1316 ಐಎಎಸ್, 586 ಐಪಿಎಸ್ ಹುದ್ದೆಗಳು ಇನ್ನೂ ಭರ್ತಿಯಾಗಬೇಕಿದೆ ಎಂದು ತಿಳಿಸಿದೆ.
ಕೇಂದ್ರದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದು, ದೇಶದಲ್ಲಿ ಭಾರತೀಯ ಆಡಳಿತ ಸೇವೆಯ (ಐಎಎಸ್) 6,858 ಹುದ್ದೆಗಳ ಪೈಕಿ 5542 ಭರ್ತಿ ಮಾಡಲಾಗಿದೆ. ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 5,055 ಹುದ್ದೆಗಳಲ್ಲಿ 4,469 ತುಂಬಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಖಾಲಿ ಇರುವ 1,316 ಐಎಎಸ್ ಹುದ್ದೆಗಳ ಪೈಕಿ 794 ನೇರ ನೇಮಕಾತಿ ಮತ್ತು 522 ಪದೋನ್ನತಿ ಮೂಲಕ ತುಂಬಬೇಕಿದೆ. ಖಾಲಿ ಇರುವ 586 ಐಪಿಎಸ್ ಹುದ್ದೆಗಳಲ್ಲಿ 209 ನೇರ ನೇಮಕಾತಿ ಮತ್ತು 377 ಬಡ್ತಿ ಮೂಲಕ ಭರ್ತಿ ಮಾಡಬೇಕಿದೆ ಎಂದು ಸಚಿವರು ಹೇಳಿದ್ದಾರೆ.
ಸರ್ಕಾರ ನೀಡಿದ ವಿವರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಮೀಸಲಾತಿ ಅನ್ವಯ ಮಾಡಿದ ಭರ್ತಿ ಬಗ್ಗೆಯೂ ಮಾಹಿತಿ ಇದೆ. 2022ರ ನಾಗರಿಕ ಸೇವಾ ಪರೀಕ್ಷೆಯ (CSE) ವೇಳೆ ಐಎಎಸ್ ಹುದ್ದೆಗೆ 75 ಸಾಮಾನ್ಯ, 45 ಒಬಿಸಿ, 29 ಎಸ್‌ಸಿ ಮತ್ತು 13 ಎಸ್‌ಟಿ ಮೀಸಲಾತಿ ನೀಡಲಾಗಿದೆ.
ಅದೇ ಅವಧಿಯಲ್ಲಿ ಐಪಿಎಸ್‌ನಲ್ಲಿ 83 ಸಾಮಾನ್ಯ, 53 ಒಬಿಸಿ, 31 ಎಸ್‌ಸಿ ಮತ್ತು 13 ಎಸ್‌ಟಿ ನೇಮಕಾತಿ ನಡೆದಿದೆ. ಐಎಫ್‌ಎಸ್‌ನಲ್ಲಿ ಒಟ್ಟು 43 ಸಾಮಾನ್ಯ, 51 ಒಬಿಸಿ, 22 ಎಸ್‌ಸಿ ಮತ್ತು 11 ಎಸ್‌ಟಿ ನೇಮಕಾತಿಗಳನ್ನು ಮಾಡಲಾಗಿದೆ ಎಂದಿದೆ.
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ವು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪ್ರತಿ ವರ್ಷ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಸುತ್ತದೆ.
ಭಾರತೀಯ ಅರಣ್ಯ ಸೇವೆ (IFS) 3,193 ಹುದ್ದೆಗಳ ಪೈಕಿ 2,151 ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಈ ಇಲಾಖೆಯಲ್ಲಿ ಸದ್ಯ 1,042 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 503 ನೇರ ನೇಮಕಾತಿ ಮತ್ತು 539 ಪದೋನ್ನತಿ ಮೂಲಕ ಭರ್ತಿ ಮಾಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.