ನವದೆಹಲಿ: ಇಂದಿನಿಂದ 2 ದಿನಗಳ ಕಾಲ ಲೋಕಸಭೆಯಲ್ಲಿ ಸಂವಿಧಾನ ದಿನದ ನಿಮಿತ್ತ ವಿಶೇಷ ಚರ್ಚೆ ನಡೆಯಲಿದೆ. ನಾಳೆ ಈ ಚರ್ಚೆ ಮೇಲೆ ಪ್ರಧಾನಿ ಮೋದಿ ಉತ್ತರ ನೀಡಲಿದ್ದಾರೆ.
ಸಂವಿಧಾನದ 75ನೇ ವರ್ಷಾಚರಣೆ ನಿಮಿತ್ತ ಲೋಕಸಭೆಯಲ್ಲಿ ಇಂದಿನಿಂದ ಎರಡು ದಿನಗಳ ಚರ್ಚೆ ಆರಂಭವಾಗಲಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಲಿದ್ದಾರೆ. ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪ್ರಯಾಣದ ಕುರಿತು ಚರ್ಚೆ ನಡೆಯಲಿದೆ ಎಂದು ಬಿಸಿನೆಸ್ ಲಿಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂವಿಧಾನದ ಕುರಿತ ಚರ್ಚೆಗೆ ಚಾಲನೆ ನೀಡಲಿದ್ದಾರೆ. ಡಿಸೆಂಬರ್ 13 – 14 ರಂದು ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿವೆ.
ಇಂದಿನ ಕಲಾಪಗಳ ಕುರಿತು ಎರಡೂ ಪ್ರಮುಖ ಪಕ್ಷಗಳು ತಮ್ಮ ಕಾರ್ಯತಂತ್ರದ ಸಭೆಗಳನ್ನು ನಡೆಸಿವೆ. ಪಿಎಂ ಮೋದಿ ನೇತ್ವತದಲ್ಲಿ ಬಿಜೆಪಿ ಸಭೆ ನಡೆಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆಗೆ ಗೃಹ ಸಚಿವ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಈ ಸಭೆಯಲ್ಲಿ ಭಾಗವಹಿಸಿದ್ದರು. ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ಸಚಿವರು ಸಭೆಯಲ್ಲಿ ಪಾಲ್ಗೊಂಡರು.
ಸದನದ ಅಜೆಂಡಾದಲ್ಲಿ ಪಟ್ಟಿ ಮಾಡಲಾದ ಪ್ರಶ್ನೋತ್ತರ ಅವಧಿಯ ನಂತರ ಚರ್ಚೆಗಳು ಪ್ರಾರಂಭವಾಗಲಿವೆ. ಲೋಕಸಭೆಯ ವೇಳಾಪಟ್ಟಿಯ ಪ್ರಕಾರ, ಏಳು ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವರದಿಗಳನ್ನು ಮಂಡಿಸಲಿದ್ದಾರೆ.
ನವೆಂಬರ್ 25 ರಿಂದ ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 20 ರಂದು ಕೊನೆಗೊಳ್ಳುವ ಸಾಧ್ಯತೆಯಿದೆ. ಸಂವಿಧಾನದ ಮೇಲಿನ ಚರ್ಚೆ ಪ್ರತಿಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ. ಈ ಬಗ್ಗೆ ಇಂದಿನಿಂದ ಚರ್ಚೆಗಳು ಸಹ ಆರಂಭವಾಗಲಿವೆ. ನವೆಂಬರ್ 26, 1949 ರಂದು ನಮ್ಮ ಸಂವಿಧಾನ ಅಂಗೀಕಾರ ಪಡೆದುಕೊಂಡಿತ್ತು. ಭಾರತೀಯ ಸಂವಿಧಾನ ಸಭೆಯು ಔಪಚಾರಿಕವಾಗಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಜನವರಿ 26, 1950 ರಂದು ಅಧಿಕೃತವಾಗಿ ಜಾರಿಗೆ ಬಂದಿತ್ತು.
2015 ರಲ್ಲಿ ಭಾರತ ಸರ್ಕಾರವು ನವೆಂಬರ್ 26ರ ದಿನವನ್ನು ಸಂವಿಧಾನದ ದಿನ ಎಂದು ಘೋಷಿಸಿತು. ಅಂದಿನಿಂದ ದೇಶಾದ್ಯಂತ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅತ್ತ ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿತು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ಸಭೆಯಲ್ಲಿ ಭಾಗವಹಿಸಿ, ಇಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸಿದರು.