ಬೆಂಗಳೂರು/ಬೆಳಗಾವಿ : ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಒದಗಿಸಲು ಗಾಜನೂರು ಸಮೀಪ ಹೊಸದಾಗಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಗಾಜನೂರು ಬಳಿ ಹೊಸದಾಗಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸ್ಥಳ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಶೀಘ್ರವೇ ಅರಣ್ಯ ಇಲಾಖೆಯಿಂದ ಎನ್ಒಸಿ ಪಡೆದು ಕಾಮಗಾರಿ ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಎನ್ಒಸಿ ಲಭಿಸದಿದ್ದರೆ, ಸೂಕ್ತವಾದ ಬದಲಿ ಜಾಗವನ್ನು ಸಹ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಶೇ.74ರಷ್ಟು ಒಳಚರಂಡಿ ವ್ಯವಸ್ಥೆ ಇದೆ. 115 ಕೋಟಿ ವೆಚ್ಚದಲ್ಲಿ 3ನೇ ಹಂತದ ಸಮಗ್ರ ಒಳಚರಂಡಿ ಯೋಜನೆಯಡಿ, ಏರಿಟೆಡ್ ಲಗೂನ್ ತಂತ್ರಜ್ಞಾನ ಆಧರಿಸಿ 35.58 ಎಂಎಲ್ಡಿ ತ್ಯಾಜ್ಯ ನೀರು ಶುದ್ದೀಕರಣ ಘಟಕ, 3 ವೆಟ್ವೆಲ್, 262 ಕಿ.ಮೀ ಉದ್ದದ ಗ್ರಾಮಸಾರ ಕೊಳವೆ ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಚನ್ನಬಸಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಕೃಷ್ಣ ರಾಜೇಂದ್ರ ನೀರು ಸರಬರಾಜು ಕೇಂದ್ರದಲ್ಲಿ 1976ರಲ್ಲಿ 13.62 ಎಂಎಲ್ಡಿ, 1996ರಲ್ಲಿ 13.38 ಎಂಎಲ್ಡಿ ಹಾಗೂ 2009ರಲ್ಲಿ 57 ಎಂಎಲ್ಡಿ ಸೇರಿ ಒಟ್ಟು 84 ಎಂಎಲ್ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 1976 ಮತ್ತು 1996ರಲ್ಲಿ ನಿರ್ಮಿಸಿರುವ ಶುದ್ಧೀಕರಣ ಘಟಕಗಳು ಶಿಥಿಲಾವಸ್ಥೆಯಲ್ಲಿವೆ ಎಂದರು.
ಇವುಗಳ ಬದಲು ಹೊಸದಾಗಿ ಶುದ್ಧೀಕರಣ ಘಟಕ ನಿರ್ಮಿಸಲು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಇಲ್ಲದ ಕಾರಣ, ಗಾಜನೂರು ಅರಣ್ಯ ಪ್ರದೇಶದಲ್ಲಿ ಸ್ಥಳ ಗುರುತಿಸಲಾಗಿದೆ. ಈ ಸ್ಥಳದಿಂದ ಗುರುತ್ವಾಕರ್ಷಣೆ ಮೂಲಕ ಶಿವಮೊಗ್ಗ ನೀರು ಸರಬರಾಜು ಮಾಡಬಹುದು. ಈ ಸಂಬಂಧ ಸರ್ವೆ ಕಾರ್ಯ ಹಾಗೂ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಅಮೃತ್ ಯೋಜನೆಯಡಿ 58 ಕೋಟಿ ರೂ ಹಾಗೂ 7 ಕೋಟಿ ರೂ ಹೆಚ್ಚುವರಿ ಅನುದಾನದಡಿ ಮಹಾನಗರ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಗೃಹ ಸಂಪರ್ಕಿತ ಒಳಚರಂಡಿ ಕೊಳವೆ ಮಾರ್ಗ, ಹಳೆ ಕೊಳವೆ ಮಾರ್ಗಗಳ ಪುನರುಜ್ಜೀವನ, 4 ವೆಟ್ವಲ್, 6 ಪಂಪಿಂಗ್ ಮೆಷಿನರಿ, ಡಿ.ಜಿ. ರೂಮ್, ಡಿ.ಜೆ.ಸೆಟ್ ಮತ್ತು ಟ್ರಾನ್ಸ್ಫಾರ್ಮರ್ ಸಬ್ಸ್ಟೇಷನ್, 11 ಕೆ.ವಿ. ಎಕ್ಸ್ಪ್ರೆಸ್ ಫೀಡರ್ ವಿದ್ಯುತ್ ಲೈನ್, 5.13 ಎಂಎಲ್ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ದೀಕರಣ ಘಟಕ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ರಾಜ್ಯ ಹಣಕಾಸು ನಿಗಮ ಬೃಹತ್ ಬೆಂಗಳೂರು ಸೇರಿ ಇತರೆ 10 ಮಹಾನಗರ ಪಾಲಿಕೆಗಳಿಗೆ ಒಟ್ಟು 2 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಇದರಲ್ಲಿ ಶಿವಮೊಗ್ಗ ನಗರಕ್ಕೆ 140 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now