ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯ ಮಳೆಯಿಂದ ರದ್ದಾದರೆ ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಇಂದಿನಿಂದ ಆರಂಭಗೊಂಡಿದೆ.
ಆರನೇ ಓವರ್‌ನಲ್ಲಿ ಮಳೆಯಿಂದಾಗಿ 20 ರಿಂದ 25 ನಿಮಿಷಗಳ ಕಾಲ ಆಟವನ್ನು ನಿಲ್ಲಿಸಲಾಗಿತ್ತು. ಇದಾದ ಬಳಿಕ 14ನೇ ಓವರ್‌ನಲ್ಲಿ ಮತ್ತೆ ಮಳೆ ಅವಾಂತರ ಸೃಷ್ಟಿಸಿತು. ಆದೆರೆ ಮೊದಲ ಬಾರಿಗಿಂತಲು ಮಳೆ ಜೋರಾಗಿದ್ದ ಕಾರಣ ಅಂಪೈರ್‌ಗಳು ಭೋಜನ ವಿರಾಮ ಘೋಷಿಸಿದ್ದರು.
ಬಳಿಕವೂ ಮಳೆ ಮುಂದುವರೆದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಹವಾಮಾನ ವರದಿ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಬ್ರಿಸ್ಬೇನ್ನಲ್ಲಿ ಮಳೆ ಮುಂದುವರೆಯಲಿದೆ. ಒಂದು ವೇಳೆ 3ನೇ ಪಂದ್ಯ ಮಳೆಗಾಹುತಿಯಾದರೆ WTC ಅಂಕಪಟ್ಟಿಯಲ್ಲಿ ಯಾರಿಗೆ ಲಾಭವಾಗಲಿದೆ ಮತ್ತು ನಷ್ಟವಾಗಲಿದೆ ಎಂಬುದನ್ನು ತಿಳಿಯೋಣ.
ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಮಾಡಲು ನಿರ್ಧರಿಸಿ, ಕಾಂಗರೂ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದಾರೆ. ಮೋಡ ಕವಿದ ವಾತಾವರಣದ ನಡುವೆ ಆಸೀಸ್ನ ಆರಂಭಿಕ ಜೋಡಿ ಉಸ್ಮಾನ್ ಖವಾಜಾ ಮತ್ತು ನಾಥನ್ ಮೆಕ್‌ಸ್ವೀನಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು.
ಮೊದಲ ಹತ್ತು ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ಆಸೀಸ್ ಸ್ಕೋರ್ ದಾಖಲಿಸಿತು. ಆದರೆ, ಪಂದ್ಯದ ನಡುವೆ ಪದೇ ಪದೇ ಮಳೆ ಸುರಿದು ಆಟಕ್ಕೆ ಅಡ್ಡಿಪಡಿಸಿತು.
ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತವು 2-1 ಅಂತರದಿಂದ ಮುನ್ನಡೆ ಸಾಧಿಸಲು ಗಬ್ಬಾದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಬೇಕಾಗಿದೆ. ಇದರೊಂದಿಗೆ WTC ಪಾಯಿಂಟ್ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ತಲುಪಲಿದೆ. ಆಸ್ಟ್ರೇಲಿಯಾ 56.67 ಶೇಕಡವಾರು ಅಂಕದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿಯುತ್ತದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಬ್ಬಾ ಟೆಸ್ಟ್ ಡ್ರಾಗೊಂಡರೆ, ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ WTC ಫೈನಲ್ ದೃಷ್ಟಿಯಿಂದ ಭಾರತದ ಮೇಲೆ ಪರಿಣಾಮ ಬೀರುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಭಾರತ ಆಸೀಸ್ ವಿರುದ್ಧ ಮುಂದಿನ ಎರಡು ಟೆಸ್ಟ್‌ಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಮತ್ತು ಇತರ ತಂಡಗಳ ಫಲಿತಾಂಶಗಳನ್ನು ಸಹ ಅವಲಂಬಿಸಬೇಕಾಗುತ್ತದೆ. ಗಬ್ಬಾ ಟೆಸ್ಟ್ ಡ್ರಾ ಆದರೆ ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು 58.89 ಆಗಲಿದ್ದು, ಭಾರತದ 55.88ಕ್ಕೆ ತಲುಪಲಿದೆ.
ಗಬ್ಬಾದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದರೆ WTC ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿಯಲಿದೆ. ಜತೆಗೆ ದಕ್ಷಿಣ ಆಫ್ರಿಕಾದ ಶೇಕಡವಾರು ಅಂಕ ಸಮನಾಗಿರಲಿದೆ.