Mandya News:
ಸಕ್ಕರೆ ನಾಡಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಜಾತ್ರೆ ಒಂದು ಕಡೆಯಾದರೆ, ಈ ಸಾಹಿತ್ಯ ಹಬ್ಬಕ್ಕೆ ಆಗಮಿಸುವ ಸಾಹಿತ್ಯಾಸ್ತಕರಿಗೆ ವಿಭಿನ್ನ ಬಗೆಯ ಭೋಜನ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಭೋಜನ ವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಅನಿಲ್ ಹಾಗೂ ಸಾಹಿತ್ಯಾಸ್ತಕರು ಮಾತನಾಡಿದ್ದಾರೆ.ಮಧ್ಯಾಹ್ನ ಹೋಳಿಗೆ, ಜೋಳದ ರೊಟ್ಟಿ, ಎಣ್ಣೆಗಾಯಿ, ಚಟ್ಣಿ ಪುಡಿ, ಹೋಳಿಗೆಗೆ ತುಪ್ಪ, ಮೊಳಕೆ ಕಾಳು ಸಾಂಬಾರು, ಅನ್ನ ಮಜ್ಜಿಗೆಯನ್ನು ಊಟಕ್ಕೆ ನೀಡುತ್ತೇವೆ.
ಮೂರು ದಿನವೂ ಕೂಡ ನಿರಂತರ ದಾಸೋಹ ನಡೆಯುತ್ತದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಜನರು ಸೇರಿದ್ದಾರೆ. ಅವರಿಗೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರು ಸಮಯವೂ ಊಟದ ವ್ಯವಸ್ಥೆ ಮಾಡಲಾಗಿದೆ” ಎಂದು ಹೇಳಿದರು. ಸಾಹಿತ್ಯ ಸಮ್ಮೇಳನದಲ್ಲಿ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಅನಿಲ್ ಮಾತನಾಡಿ, “ಬೆಳಗ್ಗೆ ನಾವು ಇಡ್ಲಿ, ವಡೆ, ಮೈಸೂರು ಪಾಕ್ ಮತ್ತು ಕಾಫಿ, ಟೀ ನೀಡಿದ್ದೇವೆ.
ಸಮ್ಮೇಳನದ ಎರಡನೇ ದಿನ ಬೆಳಗ್ಗೆ ಚಿತ್ರಾನ್ನ, ಕಡಲೆ ಬೇಳೆ ವಡೆ ಮತ್ತು ಮಧ್ಯಾಹ್ನದ ಊಟಕ್ಕೆ ಚಪಾತಿ ನೀಡುತ್ತೇವೆ. ಮಂಡ್ಯದ ಪ್ರಸಿದ್ಧ ರಾಗಿ ಮುದ್ದೆಯನ್ನೂ ಸಹ ಮಾಡಲಾಗುತ್ತದೆ ಎಂದರು. ಸಾರ್ವಜನಿಕರಿಗೆ ಮತ್ತು ವಿಐಪಿಗಳಿಗೆ, ಸಮ್ಮೇಳನದ ನೊಂದಾಯಿತ ಪ್ರತಿನಿಧಿಗಳಿಗೆ ಪ್ರತ್ಯೇಕ ಕೌಂಟರ್ಗಳನ್ನು ಮಾಡಲಾಗಿದೆ.
ಒಟ್ಟು 150 ಕೌಂಟರ್ಗಳನ್ನು ಮಾಡಿದ್ದು, ಎಲ್ಲದರಲ್ಲೂ ಒಂದೇ ರೀತಿಯ ಆಹಾರದ ವ್ಯವಸ್ಥೆ ಇದೆ ಎಂದು ಹೇಳಿದರು.”ಇದು ನನಗೆ ತುಂಬಾ ಹೆಮ್ಮೆ ಮತ್ತು ಖುಷಿ ತಂದಿದೆ. ಕನ್ನಡದ ಹಬ್ಬಕ್ಕೆ ನಮ್ಮದೊಂದು ಸೇವೆ ಎಂದುಕೊಂಡು ಕೆಲಸ ಮಾಡುತ್ತಿದ್ದೇವೆ. ಒಟ್ಟು 3,000 ಜನರು ಊಟದ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನು ಸಮ್ಮೇಳನಕ್ಕೆ ನೋಂದಾಯಿತ ಪ್ರತಿನಿಧಿಗಳಿಗೆ ಮತ್ತು ಪೊಲೀಸರಿಗೆ ಊಟದ ವ್ಯವಸ್ಥೆಯನ್ನು ವಹಿಸಿಕೊಂಡಿದ್ದೇನೆ.”
ಕಳೆದ ಮೂರು ನಾಲ್ಕು ದಿನಗಳಿಂದ ಪೊಲೀಸರಿಗೆ ಊಟ, ತಿಂಡಿ ಕೊಡುತ್ತಿದ್ದೇವೆ. ಒಟ್ಟು 4000 ಜನರ ಪೊಲೀಸ್ ತಂಡವಿದೆ. ನಿರೀಕ್ಷೆಗೂ ಮೀರಿ ಜನ ಸೇರಿರುವುದು ಖುಷಿಯ ವಿಚಾರ. ಒಲೆ ಆರಿಸಲು ಬಿಡುತ್ತಿಲ್ಲ. ಜನರು ಊಟಕ್ಕೆ ಬರುತ್ತಲೇ ಇದ್ದಾರೆ ಎಂದು ತಿಳಿಸಿದರು.
ಈ ಬಗ್ಗೆ ಸಾಹಿತ್ಯಾಸಕ್ತರಾದ ಕೆ.ಎಂ.ಭೀಮಪ್ಪ ಅವರು ಮಾತನಾಡಿ, ನಾವು ದಾವಣಗೆರೆಯಿಂದ ಬಂದಿದ್ದೇವೆ. ಇಲ್ಲಿ ಊಟದ ವ್ಯವಸ್ಥೆ ಚೆನ್ನಾಗಿದೆ. ಊಟದ ಮೆನು ಚೆನ್ನಾಗಿ ಇದೆ. ರೊಟ್ಟಿ, ಹೋಳಿಗೆ, ತುಪ್ಪ ಎಲ್ಲದಕ್ಕೂ ಪ್ರತ್ಯೇಕ ಕೌಂಟರ್ ಮಾಡಲಾಗಿದೆ.
ಜನರಲ್ಲಿ ಯಾವುದೇ ನೂಕು ನುಗ್ಗಲು ಇಲ್ಲ. ವ್ಯವಸ್ಥೆ ಚೆನ್ನಾಗಿ ಇದೆ. ಊಟವು ಕೂಡಾ ಚೆನ್ನಾಗಿ ಇತ್ತು. ಮಂಡ್ಯ ಎಂದರೆ ಊಟ, ಸಮ್ಮೇಳನದಲ್ಲಿ ಭಾಗವಹಿಸಿದವರಿಗೆ ಬಹಳ ಅಚ್ಚುಕಟ್ಟಾಗಿ ಆತಿಥ್ಯ ಮಾಡಲಾಗಿದೆ. ಬೇರೆ ಕಡೆ ಸಮ್ಮೇಳನ ಊಟಕ್ಕೆ ಹರಸಾಹಸ ಪಡುತ್ತಿದ್ದೆವು. ಆದರೆ ಇಲ್ಲಿ ಆ ರೀತಿ ಆಗಲಿಲ್ಲ” ಎಂದು ಹೇಳಿದರು.