Subrahmanya (South Kannada) News:
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇದ ಮೂರ್ತಿ ಸೀತಾರಾಮ ಯಡಪಡಿತ್ತಾಯ ಅವರು ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ ಷಷ್ಠಿಯ ದಿನವಾದ ಶನಿವಾರ ಪಂಚಾಮೃತ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕುಕ್ಕೆಯಿಂದ ಸುಮಾರು 12 ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ಪೂಜೆಯಲ್ಲಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಂಪ್ರದಾಯ ಪ್ರಕಾರ ಶನಿವಾರ ಪೂಜೆ ನೆರವೇರಿಸಲಾಯಿತು.ಕುಮಾರ ಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯನ ಪಾದಗಳು ಇವೆ. ಇದನ್ನು ಕುಮಾರಪಾದ ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ ಎಂಬುದು ಪೂರ್ವಕಾಲದಿಂದಲೂ ನಂಬಿಕೊಂಡು ಬಂದಿರುವ ಐತಿಹ್ಯ.
ವರ್ಷಕ್ಕೊಂದು ಬಾರಿ ಮಾತ್ರವೇ ಇಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಪೂಜೆ ನೆರವೇರಿಸಲಾಗುತ್ತದೆ.ಕುಮಾರ ಪರ್ವತ ಸಮುದ್ರ ಮಟ್ಟದಿಂದ ಸುಮಾರು 1712 ಮೀಟರ್ ಎತ್ತರದಲ್ಲಿದೆ. ಕುಮಾರ ಪರ್ವತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಗಳ ಗಡಿಯಲ್ಲಿ ಇದೆ. ಕುಮಾರ ಪರ್ವತಕ್ಕೆ ಹೋಗಲು ಕುಕ್ಕೆ ಸುಬ್ರಹ್ಮಣ್ಯ ಕಡೆಯಿಂದ ಮತ್ತು ಸೋಮವಾರಪೇಟೆ ತಾಲೂಕಿನ ಬೀದಳ್ಳಿ ಗ್ರಾಮದ ಕಡೆಯಿಂದ ದಾರಿಗಳಿವೆ. ಸಮುದ್ರ ಮಟ್ಟದಿಂದ ಸುಮಾರು 1712ಮೀಟರ್ ಎತ್ತರದಲ್ಲಿರುವ ಕುಮಾರ ಪರ್ವತದಲ್ಲಿರುವ ಕುಮಾರ ಪಾದಕ್ಕೆ ಮಾರ್ಗಶಿರ ಬಹುಳ ಷಷ್ಠಿಯ ದಿನ ಪಂಚಾಮೃತ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಲಾಯಿತು.
What is the mythological background? :
ಕುಮಾರ ಪರ್ವತ ಶ್ರೇಣಿಯಲ್ಲೇ ತ್ರಿಮೂರ್ತಿಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ (ಚಂಪಾಷಷ್ಠಿ)ಯ ದಿನ ಇಂದ್ರನು ಷಣ್ಮುಖನಿಗೆ ತನ್ನ ಮಗಳಾದ ದೇವಸೇನಾಳನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಸಮ್ಮತಿಸಿದ ಸುಬ್ರಹ್ಮಣ್ಯನು ಅಲ್ಲಿಯೇ ಆಕೆಯನ್ನು ವಿವಾಹವಾಗುತ್ತಾನೆ. ಬಳಿಕ ನೆರೆದಿರುವವರು ಅವನಿಗೆ ಪಟ್ಟಾಭಿಷೇಕ ಮಾಡುತ್ತಾರೆ. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರ ನದಿಯಾಯಿತು ಎಂದೂ ಪುರಾಣಗಳಲ್ಲಿ ಉಲ್ಲೇಖವಿದೆ. ಈ ಪರ್ವತದ ಮೇಲಿರುವ ಶಿವನ ದೇವಸ್ಥಾನದಲ್ಲಿಯೂ ಕೂಡ ವರ್ಷದಲ್ಲಿ ಒಂದು ಬಾರಿ ಪೂಜೆ ನಡೆಯುತ್ತದೆ.
ದೇಶದ ಮೂಲೆ ಮೂಲೆಯಿಂದ ಚಾರಣ ಪ್ರಿಯರು ಪ್ರಕೃತಿ ಮಾತೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕುಮಾರ ಪರ್ವತಕ್ಕೆ ಬರುತ್ತಾರೆ. ಕುಮಾರ ಪರ್ವತ ಕೇವಲ ಚಾರಣಕ್ಕಷ್ಟೇ ಅಲ್ಲ, ಪೌರಾಣಿಕ ಹಾಗೂ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿರುವ ಸ್ಥಳವಾಗಿದೆ.ಕುಮಾರ ಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯನ ಪಾದಗಳು ಮೂಡಿಬಂದಿರುವುದು ಕಾಣುತ್ತದೆ. ಇದನ್ನು ಕುಮಾರಪಾದ ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ. ಇದಕ್ಕೆ ಬಹುಳ ಷಷ್ಠಿಯಂದು ಕುಕ್ಕೆ ದೇಗುಲದ ಪ್ರಧಾನ ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಇನ್ನು, ಕುಮಾರ ಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರ ಪರ್ವತದಲ್ಲಿ ಹುಟ್ಟುವ ಕುಮಾರಧಾರಾ ನದಿಯಲ್ಲಿ ತೊಳೆದನು. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ಬಂದು ನೆಲೆಯಾದನು ಎಂದು ಕ್ಷೇತ್ರ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.