Bangalore News:
ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನವರಿ 17 ರಿಂದ 23ರವರೆಗೆ ಕರ್ನಾಟಕ ಕ್ರೀಡಾಕೂಟ 2025 ನಡೆಯಲಿದ್ದು, ವ್ಯವಸ್ಥಿತ ಏರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.ಕ್ರೀಡಾಕೂಟದಲ್ಲಿ 3750 ಕ್ರೀಡಾಪಟುಗಳು ಹಾಗೂ 750 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರು ಸೇರಿದಂತೆ ಅಂದಾಜು 4,500 ಜನರು ಭಾಗವಹಿಸಲಿದ್ದು ಊಟ – ತಿಂಡಿ, ವಸತಿ, ಸಾರಿಗೆ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರಿನಲ್ಲಿ 12 ಕ್ರೀಡೆಗಳು ಹಾಗೂ ಉಡುಪಿ ಮತ್ತು ಮಣಿಪಾಲಗಳಲ್ಲಿ 11 ಕ್ರೀಡೆಗಳು ಆಯೋಜನೆಗೊಳ್ಳಲ್ಲಿದ್ದು, ಶೂಟಿಂಗ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಜನವರಿ 17ರಿಂದ 23ರವರೆಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತಿದ್ದು, ಜನವರಿ 17ರಂದು ಮಂಗಳೂರಿನಲ್ಲಿ ಉದ್ಘಾಟನೆ ನಡೆಯಲಿದೆ. ಸುಮಾರು 25 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.
Release of Games Logo:
ಕ್ರೀಡಾಕೂಟದ ಲಾಂಛನದಲ್ಲಿ ಯಕ್ಷಗಾನ ಕಿರೀಟವು ಕರಾವಳಿ ಭಾಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು, ತಿಳಿನೀಲಿ ಬಣ್ಣವು ಕಡಲಿನ ಅಗಾಧತೆಯನ್ನು ಜತೆಗೆ ಸೋಲು – ಗೆಲುವುಗಳಲ್ಲಿ ಕ್ರೀಡಾಪಟುಗಳ ಶಾಂತತೆ ಮತ್ತು ಶ್ರಮವನ್ನು ಪ್ರತಿನಿಧಿಸುತ್ತದೆ ಎಂದು ಅಧಿಕಾರಿಗಳು ವಿವರಿಸಿದರು. ಕರ್ನಾಟಕ ಕ್ರೀಡಾಕೂಟ-2025ರ ಲಾಂಛನ ಬಿಡುಗಡೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೆರವೇರಿಸಿದರು.
ಸಭೆಯಲ್ಲಿ ಗೃಹ ಸಚಿವ ಡಾ. ಪರಮೇಶ್ವರ್, ಇಂಧನ ಸಚಿವ ಕೆ ಜೆ ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಕೆ. ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.